ಮುಂಬೈ: ಭಾರತೀಯ ವಾಯುಪಡೆ ಉದ್ಯೋಗಿಯೊಬ್ಬರ ಪತ್ನಿಗೆ ಡ್ರಗ್ಸ್ ನೀಡಿ, ಅತ್ಯಾಚಾರ ಎಸಗಿ, ಮತಾಂತರಕ್ಕೆ ಒತ್ತಾಯಿಸಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಮಹರಾಷ್ಟ್ರದ (Maharashtra) ನಾಗ್ಪುರದಲ್ಲಿ ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿ, ತನಿಖೆ ಆರಂಭಿಸಿದ್ದಾರೆ.
24 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 16 ತಿಂಗಳ ಕಾಲ ವ್ಯವಸ್ಥಿತವಾಗಿ ಮಾದಕ ದ್ರವ್ಯ ನೀಡಿ, ಹಲ್ಲೆ ನಡೆಸಿ, ಬ್ಲ್ಯಾಕ್ಮೇಲ್ ಮಾಡಿ, ಬಲವಂತವಾಗಿ ಮದುವೆ ಮಾಡಿ ಬೇರೆ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪದ ಮೇರೆಗೆ ಪೊಲೀಸರು ಅಯ್ಯಜ್ ತಾಜ್ ಮದರೆ (26) ಮತ್ತು ಆಮಿನ್ ಶೇಖ್ (30) ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು, ಮೂರನೇ ಆರೋಪಿ ಹಜರತ್ ಮೌಲಾನಾ ಎಂಬ ಧರ್ಮಗುರುವನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ಗಳ ಅಡಿಯಲ್ಲಿ, ಅತ್ಯಾಚಾರ, ಸುಲಿಗೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಹಾಗೂ ಮಹಾರಾಷ್ಟ್ರ ಮಾಟ ಮಂತ್ರ ವಿರೋಧಿ ಕಾಯ್ದೆಯಡಿ ಆರೋಪಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋನೆಗಾಂವ್ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಅದೇ ದಿನ ಇಬ್ಬರ ಬಂಧನ ನಡೆದಿದೆ ಎಂದು ಡಿಸಿಪಿ ಋಷಿಕೇಶ್ ಸಿಂಗಾರೆಡ್ಡಿ ತಿಳಿಸಿದ್ದಾರೆ.
ದೂರು ನೀಡಿರುವ ಮಹಿಳೆ ಮತ್ತು ಆರೋಪಿ ಮಾದಾರೆ ಪರಸ್ಪರ ಪರಿಚಯಸ್ಥರು. 2025ರಿಂದ ನನಗೆ ಚಿತ್ರಹಿಂಸೆ ನೀಡಿದ್ದಾರೆಂದು ಮಹಿಳೆ ದೂರಿದ್ದಾರೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸುಲಿಗೆ ಮಾಡಿದ್ದಾರೆ, ಧರ್ಮವನ್ನು ಮತಾಂತರಿಸಲು ಒತ್ತಡ ಹೇರಿದ್ದಾರೆ. ಅಲ್ಲದೇ ಮಾಟ ಮಂತ್ರ ಮಾಡಿದ್ದಾರೆಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.