ಮಡಿಕೇರಿ : ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಕಾದಾಟದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಘಟನೆ ನಿನ್ನೆ ನಡೆದಿತ್ತು. ಇದೀಗ ಈ ಕಾದಾಟದ ವೇಳೆ ಕಂಂಜನ್ ಆನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಆನೆಗಳ ನಡುವಿನ ಕಾದಾಟದಿಂದಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ನಿನ್ನೆ ಕುಶಾಲನಗರದ ದುಬಾರೆ ಕ್ಯಾಂಪ್ನಲ್ಲಿ ನಡೆದಿತ್ತು. ಆನೆಗಳ ನಡುವೆ ಸಿಲುಕಿ ಪ್ರವಾಸಕ್ಕೆ ಬಂದಿದ್ದ ಚೆನ್ನೈ ಮೂಲದ ಮಹಿಳೆ ದಾರುಣವಾಗಿ ಉಸಿರು ಚೆಲ್ಲಿದ್ದರು. ಅವರ ಮಗು ಮತ್ತು ಪತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ಆ ಮಹಿಳೆಯ ಸಾವಿಗೆ ಕಾರಣವಾಗಿದ್ದ ಮಾರ್ತಾಂಡ ಆನೆ ಕೂಡ ಗಂಭೀರವಾಗಿ ಗಾಯಗೊಂಡಿತ್ತು. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲಾಯಿತಾದರೂ ಕೂಡ ಚಿಕಿತ್ಸೆ ಫಲಿಸದೆ ಆನೆ ಮೃತ ಪಟ್ಟಿದೆ.
ಸ್ನಾನಕ್ಕೆಂದು ನದಿಗೆ ಕರೆತಂದಿದ್ದ ಮಾವುತರು..!
ನಿನ್ನೆ ಸ್ನಾನಕ್ಕೆಂದು ಕಾವೇರಿ ನದಿಗೆ ಮಾವುತರು ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಕರೆತಂದಿದ್ದರು. ಈ ವೇಳೆ ಅವುಗಳ ನಡುವೆ ಕಾದಾಟ ಆರಂಭವಾಗಿದ್ದು, ದಂತದಿಂದ ತಿವಿದು ಕಂಜನ್ ಆನೆ ಮಾರ್ತಾಂಡ ಆನೆಯನ್ನು ನೆಲಕ್ಕೆ ಉರುಳಿಸಿತ್ತು. ಆ ಬಳಿಕ ಕೆಲ ಸಮಯದವರೆಗೂ ಆನೆಗಳು ಕಾದಾಡಿದ್ದವು. ಮಾವುತರು ಎಷ್ಟೇ ಪ್ರಯತ್ನ ಪಟ್ಟರೂ ಮದವೇರಿದಂತೆ ವರ್ತಿಸುತ್ತಿದ್ದ ಕಂಜನ್ ಆನೆಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಮಾರ್ತಾಂಡ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಮಾರ್ತಾಂಡಗೆ ಶಿಬಿರದಲ್ಲೇ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅದು ಇಂದು ಮೃತಪಟ್ಟಿದೆ ಎಂದು ಡಿಎಫ್ಒ ಅಭಿಶೇಕ್ ಮಾಹಿತಿ ನೀಡಿದ್ದಾರೆ.
ಕಾವೇರಿ ನದಿಯಲ್ಲಿಯೇ ಆನೆಗಳ ನಡುವೆ ಕಾದಾಟ ನಡೆದು ಅವುಗಳ ನಡುವೆ ಸಿಲುಕಿ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆ ಬೆನ್ನಲ್ಲೇ ಅರಣ್ಯ ಸಚಿವರು ಇಂತಹ ಘಟನೆಗಳ ತಡೆಗೆ ಕ್ರಮಕ್ಕೆ ಆದೇಶಿಸಿದ್ದರು. ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರದಲ್ಲಿ ಮೇ 19ರಿಂದಲೇ ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡಬಾರದು. ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ಆನೆಗಳಿಗೆ ತಿನ್ನಸಬಾರದು ಎಂದು ಆದೇಶಿಸಿಲು ಸೂಚಿಸಿದ್ದರು.