ಬೆಂಗಳೂರು: ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಮಂಜು ಅಲಿಯಾಸ್ ಅಮುಕು ಡುಮುಕು ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಡಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ದೂರಿನ ಪ್ರಕಾರ, ಪಬ್ ಪ್ರಮೋಷನ್ ಕಾರ್ಯಕ್ರಮಕ್ಕೆ ಬಂದಿದ್ದ ಮಂಜು ಮದ್ಯಪಾನ ಮಾಡಿದ ಬಳಿಕ ಅಲ್ಲಿದ್ದ ಮಹಿಳಾ ಸಪ್ಲೇಯರ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಯುವತಿಯ ಕೈ ಹಿಡಿದು ಎಳೆದು, "ನಿನ್ನ ರೇಟ್ ಎಷ್ಟು?" ಎಂದು ಕೇಳಿ ಅವಮಾನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಮತ್ತೊಬ್ಬ ಯುವತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಲವಂತ ಮಾಡಿದ್ದು, ಅದನ್ನು ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆಯ ಕುರಿತು ದೂರುದಾರರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ ಬಳಿಕ, ಮಂಜು ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಮಂಜು ಅವರ ತಾಯಿಯೂ ಕರೆ ಮಾಡಿ ನಿಂದಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 74, 79, 352, 75(1), 75(2), 75(3) ಹಾಗೂ 351 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಇನ್ನು ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದು. ಮಂಜನ ಮಹಾ ಕಾರ್ಯದ ಬಗ್ಗೆ ಉಗಿದು ಉಪ್ಪಾಕಿದ್ದಾರೆ. ಜೊತೆಗೆ ಇಂತಹ ಅರೆ ಹುಚ್ಚನ ಮೇಲೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದ್ದು. ಪೊಲೀಸರು ಅಮುಕು ಡುಮುಕುವಿಗಾಗಿ ಖಾರದ ಪುಡಿ ರೆಡಿ ಮಾಡಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ.