Search


ಸಿದ್ದರಾಮಯ್ಯ ರಾಜೀನಾಮೆ ; ವಿಷ ಸೇವಿಸಲು ಯತ್ನಿಸಿದ ಅಭಿಮಾನಿ..!

ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಬಾರದು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಘಟಕ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಯಾದಗಿರಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಅಭಿಮಾನಿಯೊಬ್ಬರು ವಿಷ ಕುಡಿಯಲು ಯತ್ನಿಸಿದ್ದಾರೆ.

ಯಾದಗಿರಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು. ಮಾನವ ಸರಪಳಿ ರಚಿಸಿ ವಾಹನಗಳ ಸಂಚಾರ ತಡೆದರು. ಆರಂಭದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಮಾನವ ಸರಪಳಿ ರಚಿಸಿ ವೃತ್ತದ ಸುತ್ತಲೂ ನೂರಾರು ಜನರು ನಿಂತು ಸಂಚಾರ ತಡೆದರು. ಈ ವೇಳೆ ವ್ಯಕ್ತಿಯೊಬ್ಬರು ಟೈರ್‌ಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚುತ್ತಿದ್ದಂತೆ ಪೊಲೀಸರು ತಡೆದು, ನೀರು ಹಾಕಲು ಯತ್ನಿಸಿದರು.

ಈ ವೇಳೆ ಸಿದ್ದರಾಮಯ್ಯರ ಅಭಿಮಾನಯಾದ ಭೀಮು ಪೂಜಾರಿ ಎಂಬಾತ 'ಬೆಂಕಿ ಹಚ್ಚಿದಕ್ಕೆ ಇಷ್ಟೋಂದು ಸಂಕಷ್ಟ ಆಗುತ್ತಿದೆ. ಸಿದ್ದರಾಮಯ್ಯ ಅವರಿಗಾಗಿ ವಿಷ ಕುಡಿಯುತ್ತೇನೆ' ಎಂದು ಹೇಳಿ ಜೇಬಿನಿಂದ ವಿಷದ ಬಾಟಲಿ ತೆಗೆದು ಕುಡಿಯಲು ಯತ್ನಿಸಿದರು, ಈ ವೇಳೆ ಅಕ್ಕಪಕ್ಕದಲ್ಲಿದ್ದವರು ಮತ್ತು ಪೊಲೀಸರು ಅದನ್ನು ತಡೆದು, ವಿಷದ ಬಾಟಲಿ ಕಿತ್ತುಕೊಂಡರು.

By thebigbulletin.com - 28-05-2026


Ads in Post