ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಪ್ರಮುಖ ಹಂತ ಪೂರ್ಣಗೊಂಡಿದ್ದು, ಇಂದು ಮೊದಲ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಈ ಪೈಕಿ 1,07,96,339 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಪರಿಣಾಮವಾಗಿ ಕರಡು ಪಟ್ಟಿಯಲ್ಲಿ ಸುಮಾರು 4.46 ಕೋಟಿ ಮತದಾರರು ಮಾತ್ರ ಉಳಿದಿದ್ದಾರೆ.
ಮನೆ-ಮನೆ ಸಮೀಕ್ಷೆ, ಮತದಾರರ ವಿವರಗಳ ಪರಿಶೀಲನೆ ಹಾಗೂ ಹಿಂದಿನ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ನಡೆಸಿದ ಸಂದರ್ಭದಲ್ಲಿ ಗೈರುಹಾಜರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವವರು ಸೇರಿದಂತೆ ವಿವಿಧ ಕಾರಣಗಳಿಂದ ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿತ್ತು. ಇದೇ ಆಧಾರದ ಮೇಲೆ 1.07 ಕೋಟಿಗೂ ಹೆಚ್ಚು ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದಿವೆ.
ಆದರೆ ASDDO ಪಟ್ಟಿಯಲ್ಲಿ ಹೆಸರು ಬಂದಿರುವುದು ಅಂತಿಮವಾಗಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂದರ್ಥವಲ್ಲ. ಅರ್ಹ ಮತದಾರರಿಗೆ ತಮ್ಮ ಹೆಸರು ಮರುಸೇರ್ಪಡೆ ಮಾಡಿಸಿಕೊಳ್ಳಲು ಹಾಗೂ ವಿವರಗಳಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. SIR ಪ್ರಕ್ರಿಯೆಯ ಮುಂದಿನ ಹಂತದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಇನ್ನು ಸುಮಾರು 43.8 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತಿದ್ದು, 2002ರ SIR ಮತದಾರರ ಪಟ್ಟಿಯೊಂದಿಗೆ ವಿವರಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗದವರು ಅಥವಾ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದವರ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಹತೆ ನಿರ್ಧರಿಸಲಿದ್ದಾರೆ.
ಮತದಾರರು ತಮ್ಮ ಹೆಸರು ಕರಡು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಹೆಸರು ಕಾಣಿಸದಿದ್ದರೆ ಅಥವಾ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳಲ್ಲಿ ತಪ್ಪಿದ್ದರೆ ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಅರ್ಜಿ ಸಲ್ಲಿಸಿ ತಿದ್ದುಪಡಿ ಅಥವಾ ಮರುಸೇರ್ಪಡೆಗೆ ಅವಕಾಶ ಪಡೆಯಬಹುದು. SIR ವೇಳಾಪಟ್ಟಿಯಂತೆ ಕರಡು ಪಟ್ಟಿಯ ಬಳಿಕ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ.