Search


ಕರ್ನಾಟಕದಲ್ಲಿ SIR ಎಫೆಕ್ಟ್: 1 ಕೋಟಿಗೂ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗುವ ಸಾಧ್ಯತೆ..!

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿರುವ ಅನರ್ಹ ಹೆಸರುಗಳನ್ನು ಗುರುತಿಸುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮತದಾರರ ಹೆಸರುಗಳು ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜ್ಯದಲ್ಲಿ ಆರಂಭವಾಗಿದೆ. ಚುನಾವಣಾ ಆಯೋಗದ SIR ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರಗೊಳಿಸುವುದಾಗಿದೆ.

ಮೃತಪಟ್ಟವರು, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು ಹಾಗೂ ಇತರ ಕಾರಣಗಳಿಂದ ಅನರ್ಹರಾಗಿರುವವರ ಹೆಸರುಗಳನ್ನು ಪರಿಶೀಲಿಸಲಾಗುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು 84.3 ಲಕ್ಷ ಮತದಾರರ ಹೆಸರುಗಳನ್ನು ‘Absent, Shifted, Deceased, Duplicate and Others’ (ASDDO) ವರ್ಗದಲ್ಲಿ ಗುರುತಿಸಲಾಗಿದೆ. ಇದು ರಾಜ್ಯದ ಒಟ್ಟು ಸುಮಾರು 5.5 ಕೋಟಿ ಮತದಾರರ ಪೈಕಿ ಸುಮಾರು ಶೇ.15ರಷ್ಟಾಗಿದೆ.

ಹೆಸರು ಪಟ್ಟಿಯಿಂದ ತೆಗೆದುಹಾಕಿದರೆ ಏನಾಗುತ್ತೆ?

SIR ವೇಳೆ ಹೆಸರು ಪರಿಶೀಲನೆಗೆ ಒಳಪಟ್ಟಿರುವುದರಿಂದ ಮಾತ್ರ ಮತದಾರರ ಹೆಸರು ತಕ್ಷಣವೇ ಡಿಲೀಟ್ ಆಗುತ್ತದೆ ಎಂದರ್ಥವಲ್ಲ. ಸಂಬಂಧಿತ ದಾಖಲೆಗಳು ಮತ್ತು ಪರಿಶೀಲನಾ ಪ್ರಕ್ರಿಯೆಯ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ. ಹೆಸರು ಇಲ್ಲದಿರುವುದು ಅಥವಾ ಯಾವುದೇ ತಪ್ಪು ಕಂಡುಬಂದರೆ ಚುನಾವಣಾ ಆಯೋಗ ನಿಗದಿಪಡಿಸಿರುವ ಪ್ರಕ್ರಿಯೆಯ ಮೂಲಕ ಆಕ್ಷೇಪಣೆ ಅಥವಾ ತಿದ್ದುಪಡಿಗೆ ಅವಕಾಶವಿದೆ.

ಮತದಾರರ ಪಟ್ಟಿಯಲ್ಲಿ ಇರುವ ಮೃತರು, ಸ್ಥಳಾಂತರಗೊಂಡವರು, ನಕಲಿ/ಡ್ಯುಪ್ಲಿಕೇಟ್ ಹೆಸರುಗಳು ಮತ್ತು ಇತರ ಅನರ್ಹ ಹೆಸರುಗಳನ್ನು ತೆಗೆದುಹಾಕಿ, ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸುವುದು SIRನ ಪ್ರಮುಖ ಉದ್ದೇಶವಾಗಿದೆ. ಚುನಾವಣಾ ಆಯೋಗವೂ SIR ಮೂಲಕ ಅರ್ಹ 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.

By Ravikumar - 02-08-2026


Ads in Post