Search


ವಂದೇ ಭಾರತ್‌ ಪ್ರಯಾಣಕ್ಕೆ ಮನಸೋತ ಸೋನಂ ವಾಂಗ್‌ಚುಕ್; ಚೆನಾಬ್ ಸೇತುವೆ ಕಂಡು ಫುಲ್ ಖುಷ್

ನವದೆಹಲಿ: ಪರಿಸರ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರು ಲಡಾಖ್‌ಗೆ ತೆರಳುವ ವೇಳೆ ದೆಹಲಿ–ಶ್ರೀನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ್ದು, ಭಾರತೀಯ ರೈಲ್ವೆಯ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಯಾಣದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅವರು, ಚೆನಾಬ್ ರೈಲು ಸೇತುವೆ ಮೇಲಿನ ಸಂಚಾರವನ್ನು "ಅದ್ಭುತ ಅನುಭವ" ಎಂದು ಬಣ್ಣಿಸಿದ್ದಾರೆ.

"ಇಂತಹ ವಿಶ್ವಮಟ್ಟದ ಮೂಲಸೌಕರ್ಯ ನಿರ್ಮಿಸಿರುವ ಭಾರತೀಯ ಇಂಜಿನಿಯರ್‌ಗಳು ಹಾಗೂ ರೈಲ್ವೆ ಸಿಬ್ಬಂದಿಗೆ ಅಭಿನಂದನೆಗಳು. ಈ ಪ್ರಯಾಣ ನಿಜಕ್ಕೂ ಮರೆಯಲಾಗದ ಅನುಭವ" ಎಂದು ವಾಂಗ್‌ಚುಕ್ ಹೇಳಿದ್ದಾರೆ. ಕಾಶ್ಮೀರ ಕಣಿವೆಯ ನೈಸರ್ಗಿಕ ಸೌಂದರ್ಯ, ಸುರಂಗ ಮಾರ್ಗಗಳು ಹಾಗೂ ಚೆನಾಬ್ ಸೇತುವೆ ವೀಕ್ಷಣೆಯ ಕ್ಷಣಗಳು ತಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿವೆ ಎಂದಿದ್ದಾರೆ. ವಂದೇ ಭಾರತ್ ರೈಲಿನ ವೇಗ, ಸ್ವಚ್ಛತೆ ಮತ್ತು ಪ್ರಯಾಣಿಕರಿಗೆ ನೀಡಲಾಗಿರುವ ಸೌಲಭ್ಯಗಳನ್ನೂ ಅವರು ಶ್ಲಾಘಿಸಿದ್ದಾರೆ.

ಇದೇ ವೇಳೆ, ದೇಶ ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸದ ವಿಷಯ. ಆದರೆ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಸರ್ಕಾರ ನೀಡಿರುವ ಭರವಸೆಗಳನ್ನೂ ಇದೇ ರೀತಿಯ ಬದ್ಧತೆಯಿಂದ ಈಡೇರಿಸಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಸೋನಂ ವಾಂಗ್‌ಚುಕ್ ಅವರ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯ ಅಭಿವೃದ್ಧಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

By Ravikumar - 30-07-2026


Ads in Post