Search


ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ: ಆಸ್ಪತ್ರೆ ಬಂದು ಜ್ಯೂಸ್ ಕುಡಿಸಿದ ಜೆ.ಪಿ.ನಡ್ಡಾ

ನವದೆಹಲಿ: ದೇಶಾದ್ಯಂತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕೆಂದು ಒತ್ತಾಯಿಸಿ ಕಳೆದ 26 ದಿನಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆಯ ಬಳಿಕ ಕೆಲವು ಪ್ರಮುಖ ಭರವಸೆಗಳು ದೊರೆತ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸ್ವತಃ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ತಮ್ಮ ಕೈಯಿಂದ ಸೋನಂ ವಾಂಗ್ಚಕ್ ಗೆ ಜ್ಯೂಸ್ ಕುಡಿಸಿ ಉಪವಾಸಕ್ಕೆ ಇತಿಶ್ರೀ ಹಾಡಿದ್ದಾರೆ.

ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಆತಂಕಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರುವುದಾಗಿ ಹಾಗೂ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಯಾವುದೇ ಪ್ರತೀಕಾರಾತ್ಮಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ. ಈ ಭರವಸೆಯ ನಂತರ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ವಾಂಗ್ಚುಕ್ ಜ್ಯೂಸ್ ಸೇವಿಸಿ ಉಪವಾಸವನ್ನು ಮುಕ್ತಾಯಗೊಳಿಸಿದರು.

ಉಪವಾಸ ಅಂತ್ಯಗೊಂಡಿದ್ದರೂ ವಿದ್ಯಾರ್ಥಿಗಳ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಇಲ್ಲಿಗೆ ಕೊನೆಗೊಂಡಿಲ್ಲ ಎಂದು ಪ್ರತಿಭಟನಾ ಸಂಘಟನೆಗಳು ಸ್ಪಷ್ಟಪಡಿಸಿವೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಸಮಗ್ರ ತನಿಖೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾ ಮುಖಂಡರು ತಿಳಿಸಿದ್ದಾರೆ.

ಇದೇ ವೇಳೆ, ಸೋನಂ ವಾಂಗ್ಚುಕ್ ಅವರು ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳು ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಮ್ಮ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ. ಸರ್ಕಾರ ನೀಡಿರುವ ಭರವಸೆಗಳು ಕೇವಲ ಮಾತುಗಳಾಗದೆ, ಕಾರ್ಯರೂಪಕ್ಕೆ ಬರಬೇಕು ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ದೆಹಲಿಯ ಜಂತರ್ ಮಂತರ್ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈಗ ಉಪವಾಸ ಅಂತ್ಯಗೊಂಡಿದ್ದರೂ, ವಿದ್ಯಾರ್ಥಿಗಳ ಬೇಡಿಕೆಗಳು ಈಡೇರುವವರೆಗೆ ಚಳವಳಿ ವಿವಿಧ ರೂಪಗಳಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

By Ravikumar - 24-07-2026


Ads in Post