ಬೆಂಗಳೂರು: ಐದು ದಶಕಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಸುವರ್ಣ ಮಹೋತ್ಸವ ಕಾರ್ಯಕ್ರಮ ಸೆಪ್ಟೆಂಬರ್ 12ರಂದು ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ತಿಮ್ಮೇಗೌಡ ತಿಳಿಸಿದ್ದಾರೆ.
ಜಯನಗರದಲ್ಲಿರುವ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಪ್ರಸ್ತುತ 11 ಶಾಖೆಗಳನ್ನು ಹೊಂದಿದ್ದು, ಶೀಘ್ರದಲ್ಲೇ ಮೈಸೂರು, ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಮತ್ತಷ್ಟು ಶಾಖೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಬ್ಯಾಂಕ್ನಲ್ಲಿ 16 ಸಾವಿರ ಸದಸ್ಯರಿದ್ದು, ದಾಖಲೆಗಳು ಸಮರ್ಪಕವಾಗಿದ್ದರೆ ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ವಿಮಾ ಸವಲತ್ತು
ವಾಹನ, ಶಿಕ್ಷಣ, ವ್ಯಾಪಾರ ಸೇರಿದಂತೆ ವಿವಿಧ ಅಗತ್ಯಗಳಿಗೆ ಸಾಲ ನೀಡಲಾಗುತ್ತಿದ್ದು, ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ರಾಜ್ಯದ ಉತ್ತಮ ಸಹಕಾರಿ ಬ್ಯಾಂಕ್ಗಳ ಪೈಕಿ ಗುರುತಿಸಿಕೊಂಡಿದೆ ಎಂದು ತಿಮ್ಮೇಗೌಡ ಹೇಳಿದರು. ಹಿರಿಯ ನಾಗರಿಕ ಸದಸ್ಯರಿಗೆ ವೈದ್ಯಕೀಯ ನೆರವಿನಡಿ ಒಳರೋಗಿ ಚಿಕಿತ್ಸೆಗೆ ಗರಿಷ್ಠ 10 ಸಾವಿರ ರೂ.ವರೆಗೆ ವೆಚ್ಚ ಭರಿಸುವ ಯೋಜನೆಯನ್ನು ಎರಡು ವರ್ಷಗಳ ಹಿಂದೆ ಆರಂಭಿಸಲಾಗಿದ್ದು, ಇದರಿಂದ ಸದಸ್ಯರಿಗೆ ಸಾಕಷ್ಟು ಪ್ರಯೋಜನವಾಗಿದೆ ಎಂದರು. ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಹಾಗೂ ಯಶಸ್ವಿನಿ ಆರೋಗ್ಯ ವಿಮೆ ಸೇರಿದಂತೆ ವಿವಿಧ ವಿಮಾ ಸೌಲಭ್ಯಗಳನ್ನೂ ಬ್ಯಾಂಕ್ ಒದಗಿಸುತ್ತಿದೆ ಎಂದು ತಿಳಿಸಿದರು.
ವಾರಸುದಾರರಿಲ್ಲದ ಖಾತೆದಾರರ ಪತ್ತೆ
ಸುವರ್ಣ ಮಹೋತ್ಸವದ ಅಂಗವಾಗಿ ವಿಳಾಸ ಪತ್ತೆಯಾಗದೆ ಅಥವಾ ವಾರಸುದಾರರಿಲ್ಲದೆ RBIಯ DEAF ನಿಧಿಗೆ ವರ್ಗಾವಣೆಯಾಗಿರುವ ಕನಿಷ್ಠ 100 ಠೇವಣಿಗಳ ಠೇವಣಿದಾರರನ್ನು ಪತ್ತೆಹಚ್ಚಿ, ಅವರ ವಿಳಾಸವನ್ನು ಗುರುತಿಸಿ ಹಣವನ್ನು ಮರಳಿಸುವ ಮಹತ್ವದ ಯೋಜನೆಗೂ ಚಾಲನೆ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
2022ರಿಂದ ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ‘ಸದೃಢ ಹಣಕಾಸು ನಿರ್ವಹಣಾ ಬ್ಯಾಂಕ್’ (FSWM) ಎಂದು ಗುರುತಿಸಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ‘Eligibility Criteria for Branch Authorisation’ ಮಾನದಂಡದಡಿಯಲ್ಲೂ ಅರ್ಹತೆ ಪಡೆದಿದೆ ಎಂದು ತಿಮ್ಮೇಗೌಡ ಹೇಳಿದರು.
ಬ್ಯಾಂಕ್ನ ಉಪಾಧ್ಯಕ್ಷ ವಾಸನ್ ಮಾತನಾಡಿ, 50ನೇ ವರ್ಷ ಪೂರ್ಣಗೊಳ್ಳುವ ವೇಳೆಗೆ 500 ಕೋಟಿ ರೂ. ಠೇವಣಿ ಸಂಗ್ರಹ ಹಾಗೂ 350 ಕೋಟಿ ರೂ. ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿತ್ತು. ಈ ಎರಡೂ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲಾಗಿದೆ ಎಂದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗೃಹ ಕೈಗಾರಿಕೆಗಳು, ಸೇವಾ ಕ್ಷೇತ್ರ, ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ವಿವಿಧ ವಲಯಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಬ್ಯಾಂಕ್ ದೇಶದ ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕೃಷ್ಣ ಜಿ.ಒ., ಸತ್ಯನಾರಾಯಣಯ್ಯ, ಮುರಳಿ, ಶಶಿಕಿರಣ್, ಸಂಜೀವಯ್ಯ, ಅಮಿತಾ, ವಿಜಯಲಕ್ಷ್ಮಿ ಹಾಗೂ ಹರಿಚರಣ್, ಸಲಹೆಗಾರ ಯಜ್ಞಮಯ್ಯ, ಪ್ರಧಾನ ವ್ಯವಸ್ಥಾಪಕಿ ಕೋಕಿಲ ಎಂ.ಎಸ್., ಉಪ ಪ್ರಧಾನ ವ್ಯವಸ್ಥಾಪಕಿ ಪುಷ್ಪಲತಾ ಸೇರಿದಂತೆ ಬ್ಯಾಂಕ್ನ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.