Search


ಉಕ್ರೇನ್ ಮೇಲಿನ ಯುದ್ಧವನ್ನ ನಿಲ್ಲಿಸಿ; SEO ಶೃಂಗಸಭೆಯಲ್ಲಿ ಪುಟಿನ್ ಗೆ ಮೋದಿ ಮನವಿ

ನವದೆಹಲಿ: ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಕಿರ್ಗಿಸ್ತಾನದ ಬಿಷ್ಕಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಭೆಗಳ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ. ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳು ಮತ್ತು ಪಾಲುದಾರರು ಮುಂದಿಟ್ಟಿರುವ ಶಾಂತಿ ಉಪಕ್ರಮಗಳನ್ನು ಭಾರತ ನಿರಂತರವಾಗಿ ಬೆಂಬಲಿಸುತ್ತಿದೆ ಎಂದು ಮೋದಿ ಪುಟಿನ್‌ಗೆ ತಿಳಿಸಿದ್ದಾರೆ ಎಂದು ಮಿಸ್ರಿ ಹೇಳಿದ್ದಾರೆ.

ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಭಾರತ ಸಿದ್ಧವಿದೆ. ಸಂಘರ್ಷವನ್ನು ಅಂತ್ಯದತ್ತ ಕೊಂಡೊಯ್ಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲು ಭಾರತ ಸಿದ್ಧವಾಗಿದೆ ಎಂಬುದನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಪುಟಿನ್‌ಗೆ ಸ್ಪಷ್ಟಪಡಿಸಿದ್ದಾರೆ. ಉಕ್ರೇನ್ ಯುದ್ಧವು ಜಾಗತಿಕ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಶಾಂತಿ ಸ್ಥಾಪನೆಗೆ ತ್ವರಿತ ಕ್ರಮ ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಮಿಸ್ರಿ ತಿಳಿಸಿದ್ದಾರೆ.

ಪುಟಿನ್‌ಗೆ ಮೋದಿ ಶಾಂತಿ ಸಂದೇಶ

ಕಿರ್ಗಿಸ್ತಾನ್ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಮತ್ತೊಮ್ಮೆ ಶಾಂತಿಯ ಸಂದೇಶ ನೀಡಿದ್ದಾರೆ. “ಯುದ್ಧಕ್ಕಾಗಿ ಖರ್ಚು ಮಾಡುವ ಪ್ರತಿದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ. ಆದ್ದರಿಂದ ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದತ್ತ ಸಾಗಬೇಕಾಗಿದೆ” ಎಂದು ಮೋದಿ ಕರೆ ನೀಡಿದ್ದಾರೆ.

ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಾದ ಮತ್ತು ರಾಜತಾಂತ್ರಿಕತೆ ಅತ್ಯಂತ ಪ್ರಮುಖ ಮಾರ್ಗಗಳಾಗಿವೆ ಎಂಬ ಭಾರತದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಇನ್ನು, ವಾರ್ಷಿಕ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿರುವುದಕ್ಕೂ ಒಂದು ವಾರ ಮುನ್ನ ಉಭಯ ನಾಯಕರ ಈ ಮಹತ್ವದ ಮಾತುಕತೆ ನಡೆದಿದೆ.

By Ravikumar - 01-09-2026


Ads in Post