ಬೆಂಗಳೂರು: ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ಇಂಧನದ ಅಳತೆಯಲ್ಲಿ ವಂಚನೆಯಾಗುವುದನ್ನು ತಡೆಯಲು ಕರ್ನಾಟಕ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜ್ಯಾದ್ಯಂತ ಪೆಟ್ರೋಲ್ ಬಂಕ್ಗಳ ಮೇಲೆ ಹಠಾತ್ ತಪಾಸಣೆ ನಡೆಸಿ, ಅಕ್ರಮ ಕಂಡುಬಂದರೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದಲ್ಲಿರುವ ಒಟ್ಟು 5,946 ಪೆಟ್ರೋಲ್ ಬಂಕ್ಗಳ ಪೈಕಿ ಮೊದಲ ಹಂತದಲ್ಲಿ 805 ಬಂಕ್ಗಳಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ ತಪಾಸಣೆ ನಡೆಸಿದೆ. ಈ ಪೈಕಿ 768 ಬಂಕ್ಗಳಲ್ಲಿ ಇಂಧನದ ಅಳತೆಯಲ್ಲಿ ವ್ಯತ್ಯಾಸ ಹಾಗೂ ಕಡಿಮೆ ಪ್ರಮಾಣದ ಪೂರೈಕೆ ಕಂಡುಬಂದಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಗ್ರಾಹಕರಿಗೆ ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ 101 ಪೆಟ್ರೋಲ್ ಬಂಕ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ತಪಾಸಣೆ ವೇಳೆ ಒಟ್ಟು 3,071 ಪೆಟ್ರೋಲ್ ಪೂರೈಕೆ ಗನ್ಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ 2,618 ಗನ್ಗಳಲ್ಲಿ ಅಳತೆ ದೋಷಗಳು ಪತ್ತೆಯಾಗಿವೆ. ಇದು ಪರಿಶೀಲಿಸಲಾದ ಪೂರೈಕೆ ಗನ್ಗಳ ಪೈಕಿ ಸುಮಾರು ಶೇ.85ರಷ್ಟಾಗಿದೆ. ಇಂತಹ ವ್ಯತ್ಯಾಸಗಳು ಕಂಡುಬಂದಾಗ ನಿಯಮಾನುಸಾರ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕಿದ್ದರೂ ಈ ಬಗ್ಗೆ ಸೂಕ್ತ ಗಮನ ಹರಿಸಲಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಗ್ರಾಹಕರಿಗೆ ಅನುಮಾನ ಬಂದಲ್ಲಿ ಪೆಟ್ರೋಲ್ ಬಂಕ್ನಲ್ಲೇ ಇಂಧನದ ಅಳತೆಯನ್ನು ಪರಿಶೀಲಿಸಲು ಅವಕಾಶ ಕಲ್ಪಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಜತೆಗೆ, ಅಕ್ರಮ ಅಥವಾ ಕಡಿಮೆ ಪ್ರಮಾಣದ ಇಂಧನ ಪೂರೈಕೆಯ ಕುರಿತು ಸಾರ್ವಜನಿಕರು ಉಚಿತ ಸಹಾಯವಾಣಿ ಮೂಲಕ ದೂರು ನೀಡುವಂತೆ ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ ತಪಾಸಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಇಂಧನ ಖರೀದಿಸುವ ಸಾರ್ವಜನಿಕರ ಹಿತಾಸಕ್ತಿಯನ್ನು ರಕ್ಷಿಸುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ಯಾವುದೇ ಬಂಕ್ನಲ್ಲಿ ಅಳತೆ ವ್ಯತ್ಯಾಸ ಅಥವಾ ವಂಚನೆ ಕಂಡುಬಂದರೆ, ಮಾಲೀಕರು ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಪರವಾನಗಿ ರದ್ದುಪಡಿಸುವಂತಹ ಕ್ರಮಗಳನ್ನೂ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೇ ವೇಳೆ, ಪೆಟ್ರೋಲ್ ಗನ್ಗಳ ಕ್ಯಾಲಿಬರೇಷನ್ಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ಎರಡು ಅಧಿಸೂಚನೆಗಳ ಬಗ್ಗೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಈ ಹಿಂದೆ ವರ್ಷಕ್ಕೊಮ್ಮೆ ಕ್ಯಾಲಿಬರೇಷನ್ ಮಾಡಬೇಕಿದ್ದ ನಿಯಮವನ್ನು ಎರಡು ವರ್ಷಕ್ಕೊಮ್ಮೆ ಮಾಡುವಂತೆ ಬದಲಾಯಿಸಲಾಗಿದೆ. ಅಲ್ಲದೆ, ಪೆಟ್ರೋಲ್ ಗನ್ಗಳ ಕ್ಯಾಲಿಬರೇಷನ್ ಅನ್ನು ಖಾಸಗಿ ಸಂಸ್ಥೆಗಳ ಮೂಲಕ ನಡೆಸಲು ಅವಕಾಶ ನೀಡುವ ಅಧಿಸೂಚನೆಯೂ ಹೊರಬಂದಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರದ ಈ ಬದಲಾವಣೆಗಳಿಂದ ತಪಾಸಣಾ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗಿತ್ತು. ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಜಂಟಿ ಕಾರ್ಯಾಚರಣೆ ಹಾಗೂ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.