ಬೆಂಗಳೂರು: ದರ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸಕ್ಕರೆ ಹಾಗೂ ಬೆಲ್ಲದ ಬೆಲೆ ಮತ್ತೆ ಏರಿಕೆಯಾಗಿದ್ದು, ಹಬ್ಬಗಳ ಸಂದರ್ಭದಲ್ಲಿ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳುವಂತಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೆ.ಜಿ. ಸಕ್ಕರೆ ಬೆಲೆ ₹66ರಷ್ಟಿತ್ತು. ಇದೀಗ ₹70ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಬೆಲ್ಲದ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದ್ದು, ಕೆ.ಜಿ.ಗೆ ₹68 ಇದ್ದ ಬೆಲೆ ಇದೀಗ ₹80ಕ್ಕೆ ತಲುಪಿದೆ. ಅಂದರೆ ಬೆಲ್ಲದ ಬೆಲೆಯಲ್ಲಿ ಕೆ.ಜಿಗೆ ₹12ರಷ್ಟು ಹೆಚ್ಚಳವಾಗಿದೆ. � ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಬ್ಬಿನ ಉತ್ಪಾದನೆ ಕುಸಿತ, ಹವಾಮಾನ ಸಂಬಂಧಿತ ಸಮಸ್ಯೆಗಳು, ಹಬ್ಬದ ಬೇಡಿಕೆ ಹಾಗೂ ಪೂರೈಕೆಯಲ್ಲಿನ ವ್ಯತ್ಯಯಗಳು ಸಕ್ಕರೆ ಬೆಲೆ ಏರಿಕೆಗೆ ಕಾರಣಗಳಾಗಿವೆ ಎಂದು ವರದಿಗಳು ತಿಳಿಸಿವೆ.
ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆಯ ಪರಿಣಾಮ ಸಿಹಿತಿಂಡಿ, ಬೇಕರಿ ಉತ್ಪನ್ನಗಳು ಸೇರಿದಂತೆ ಹಲವು ಆಹಾರ ಪದಾರ್ಥಗಳ ಬೆಲೆಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಹಬ್ಬದ ಸಮಯದಲ್ಲಿ ಸಿಹಿ ಖರೀದಿಸುವ ಹಾಗೂ ಮನೆಯಲ್ಲಿ ಸಿಹಿ ತಯಾರಿಸುವ ಗ್ರಾಹಕರಿಗೆ ಇದು ಹೆಚ್ಚುವರಿ ಆರ್ಥಿಕ ಹೊರೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವೂ ಸಕ್ಕರೆ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯವಿದೆ ಎಂದು ತಿಳಿಸಿದೆ.