Search


ಲಿವ್‌ಇನ್ ಸಂಬಂಧದ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಮಾನ

ನವದೆಹಲಿ: ಮದುವೆಯಾಗದೆ ಒಟ್ಟಿಗೆ ಜೀವನ ನಡೆಸುತ್ತಿರುವ ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಮಹತ್ವದ ರಕ್ಷಣೆ ನೀಡಿದೆ. ಮದುವೆಯ ಸ್ವರೂಪ ಹೊಂದಿರುವ ಲಿವ್‌ಇನ್ ಸಂಬಂಧದಲ್ಲಿ ಮಹಿಳೆಯ ಮೇಲೆ ಕ್ರೌರ್ಯ ಅಥವಾ ಕಿರುಕುಳ ನಡೆದರೆ, ಆಕೆಗೆ ಪತ್ನಿಯಂತೆ ಕಾನೂನು ರಕ್ಷಣೆ ದೊರೆಯಲಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ. ಸಂಬಂಧವು ಕಾನೂನುಬದ್ಧ ವಿವಾಹವಲ್ಲ ಎಂಬ ಒಂದೇ ಕಾರಣಕ್ಕೆ ಮಹಿಳೆಗೆ ಕ್ರೌರ್ಯದಿಂದ ರಕ್ಷಣೆ ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಈಗಾಗಲೇ ವಿವಾಹವಾಗಿದ್ದ ವ್ಯಕ್ತಿಯೊಬ್ಬರು ಮತ್ತೊಬ್ಬ ಮಹಿಳೆಯೊಂದಿಗೆ ದಾಂಪತ್ಯದ ಸ್ವರೂಪದಲ್ಲಿ ವಾಸಿಸುತ್ತಿದ್ದರು. ಆ ಮಹಿಳೆ ವರದಕ್ಷಿಣೆ ಕಿರುಕುಳ ಹಾಗೂ ಕ್ರೌರ್ಯದ ಆರೋಪದಡಿ ದೂರು ದಾಖಲಿಸಿದ್ದರು. ಆದರೆ, ತಾನು ಆಕೆಯ ಕಾನೂನುಬದ್ಧ ಪತಿಯಲ್ಲ ಎಂಬ ಕಾರಣ ನೀಡಿ ಆರೋಪಗಳಿಂದ ಮುಕ್ತಗೊಳಿಸುವಂತೆ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್‌ನ ನಿಲುವನ್ನು ಎತ್ತಿಹಿಡಿದಿದೆ.

ಲಿವ್‌ಇನ್ ಸಂಬಂಧಕ್ಕೂ ಕಾನೂನು ರಕ್ಷಣೆ

ಮದುವೆಯ ಸ್ವರೂಪ ಹೊಂದಿರುವ ಸಂಬಂಧದಲ್ಲಿ ದೀರ್ಘಕಾಲ ಒಟ್ಟಿಗೆ ಜೀವನ ನಡೆಸುತ್ತಿರುವ ಮಹಿಳೆಯನ್ನು ಕೇವಲ ಮದುವೆ ಪ್ರಮಾಣಪತ್ರ ಇಲ್ಲ ಎಂಬ ಕಾರಣಕ್ಕೆ ಕಾನೂನು ರಕ್ಷಣೆಯಿಂದ ಹೊರಗಿಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತೀರ್ಪು ನೀಡಿದೆ.

ಮಹಿಳೆಯ ಮೇಲೆ ದೈಹಿಕ ಅಥವಾ ಮಾನಸಿಕ ಕ್ರೌರ್ಯ, ಕಿರುಕುಳ ಸೇರಿದಂತೆ ಕಾನೂನಿನಲ್ಲಿ ನಿರ್ದಿಷ್ಟಪಡಿಸಿರುವ ರೀತಿಯ ಹಿಂಸೆ ನಡೆದಿದ್ದರೆ, ಪ್ರಕರಣದ ವಾಸ್ತವಾಂಶಗಳ ಆಧಾರದ ಮೇಲೆ ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಈ ತೀರ್ಪು ಲಿವ್‌ಇನ್ ಸಂಬಂಧಗಳಲ್ಲಿರುವ ಮಹಿಳೆಯರ ಹಕ್ಕುಗಳ ದೃಷ್ಟಿಯಿಂದ ಮಹತ್ವದ್ದಾಗಿದೆ. ಸಂಬಂಧಕ್ಕೆ ನೀಡಿರುವ ಹೆಸರಿಗಿಂತ, ಆ ಸಂಬಂಧದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಕ್ರೌರ್ಯ ಮತ್ತು ಆಕೆಯ ಕಾನೂನು ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂಬ ನಿಲುವನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

By Ravikumar - 04-08-2026


Ads in Post