Search


ಮೋದಿ ಟೀಕೆ ಮಾಡಿದ ಹರಿಪ್ರಸಾದ್ ವಿರುದ್ಧ ಸುರೇಶ ಕುಮಾರ್ ಆಕ್ರೋಶ; ಸೋನಿಯಾ ಗಾಂಧಿಗೆ ನೀವು ಮಾಡಿಲ್ವಾ ಎಂದ ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಮಾಡಿರುವ ಟೀಕೆಗೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿಯನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದು ಹೇಳಿರುವ ಅವರು, ಸುರೇಶ್ ಕುಮಾರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ್, ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದಕ್ಕೆ ತಮ್ಮನ್ನು ‘ಹೊಲಸು ಬಾಯಿ’ ಎಂದು ಸುರೇಶ್ ಕುಮಾರ್ ಟೀಕಿಸಿರುವುದನ್ನು ಪ್ರಶ್ನಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಕೈ ಅಥವಾ ಬಾಯಿ ಹೊಲಸು ಮಾಡಿಕೊಂಡಿಲ್ಲ ಎಂದು ಹೇಳಿರುವ ಅವರು, ಸುರೇಶ್ ಕುಮಾರ್ ಅವರು ಸಜ್ಜನಿಕೆಯ ಮುಖವಾಡ ಧರಿಸಿಕೊಂಡಿದ್ದಾರೆ ಎಂದು ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರು ಈ ಹಿಂದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಾಡಿದ್ದ ವೈಯಕ್ತಿಕ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರು ನಡೆಸಿದ್ದಾರೆ ಎನ್ನಲಾದ ವೈಯಕ್ತಿಕ ದಾಳಿಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ಇದೇ ವೇಳೆ ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿದೆ ಎನ್ನಲಾದ ದೂರಿನ ಬಗ್ಗೆಯೂ ಹರಿಪ್ರಸಾದ್ ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಪಾಲಿಕೆ ವತಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟು ಸುಮಾರು ₹300 ಕೋಟಿ ಮೊತ್ತದ ಟೆಂಡರ್ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ದೂರು ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

2020ರಲ್ಲಿ ₹72.25 ಕೋಟಿ ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಟೆಂಡರ್‌ನಲ್ಲಿ ಕಡಿಮೆ ಮೊತ್ತದ ಬಿಡ್ ಸಲ್ಲಿಸಿದ್ದ ಅರ್ಹ ಗುತ್ತಿಗೆದಾರರನ್ನು ತಪ್ಪಿಸಲು ಶಾಸಕರು ಅಧಿಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ ಎಂಬ ಆರೋಪವನ್ನೂ ಹರಿಪ್ರಸಾದ್ ಮಾಡಿದ್ದಾರೆ. ಪಾಲಿಕೆಯ ಟಿವಿಸಿಸಿ ಮುಖ್ಯ ಎಂಜಿನಿಯರ್ ಕಚೇರಿಯ ಟಿಪ್ಪಣಿಯಲ್ಲೇ ಶಾಸಕರ ಒತ್ತಡದ ಕುರಿತು ಉಲ್ಲೇಖವಿದೆ ಎಂದು ಅವರು ಹೇಳಿದ್ದಾರೆ.

“ಇದು ಹೊಲಸು ರಾಜಕೀಯವೋ ಅಥವಾ ಲಂಚದ ಹಣದ ಆಸೆಗಾಗಿ ಮಾಡಿರುವ ‘ಸಲೀಸು’ ರಾಜಕಾರಣವೋ?” ಎಂದು ಪ್ರಶ್ನಿಸಿರುವ ಹರಿಪ್ರಸಾದ್, ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಜ್ಜನ ಎಂಬ ಬೋರ್ಡ್ ಹಾಕಿಕೊಂಡ ಮಾತ್ರಕ್ಕೆ ಯಾರೂ ಸಜ್ಜನರಾಗುವುದಿಲ್ಲ. ಜನರ ಹಣ, ಜನರ ಹಕ್ಕು ಹಾಗೂ ಪ್ರಜಾಪ್ರಭುತ್ವದ ಪ್ರಶ್ನೆ ಎದುರಾದಾಗ ಮುಖವಾಡ ಕಳಚುತ್ತದೆ ಎಂದು ಅವರು ಹೇಳಿದ್ದಾರೆ.

By Ravikumar - 20-09-2026


Ads in Post