ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವದ ಶೋಭಾಯಾತ್ರೆ ವಿಚಾರ ಇದೀಗ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, “ಬ್ರಿಟಿಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡೋರು ನಾವು, ಈಗ ಮಾಡದೇ ಇರ್ತೀವಾ? ಟಿ. ನರಸೀಪುರದಲ್ಲಿ ಸಿಗೋಣ” ಎಂದು ಹೇಳಿದ್ದಾರೆ.
ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹಿಂದೂ ಜಾಗರಣಾ ವೇದಿಕೆ ಸೆ.18ರಂದು ಶೋಭಾಯಾತ್ರೆ ನಡೆಸಲು ಮುಂದಾಗಿದೆ. ಪಟ್ಟಣದಲ್ಲಿ ಈಗಾಗಲೇ ಶೋಭಾಯಾತ್ರೆಯ ಸಿದ್ಧತೆಗಳು ನಡೆದಿದ್ದು, ವಿವಿಧೆಡೆ ಕರಪತ್ರಗಳನ್ನು ಹಂಚಲಾಗಿದೆ. ಪೊಲೀಸ್ ಅಧಿಕಾರಿಯ ಹೇಳಿಕೆಗೆ ಉತ್ತರ ನೀಡಲು ಶೋಭಾಯಾತ್ರೆಗೆ ಆಗಮಿಸುವಂತೆ ಕರಪತ್ರದಲ್ಲಿ ಕರೆ ನೀಡಲಾಗಿದೆ.
ಶೋಭಾಯಾತ್ರೆ ಸಂಜೆ 4 ಗಂಟೆಗೆ ಆರಂಭವಾಗಲಿದ್ದು, ಮಸೀದಿ ಇರುವ ರಸ್ತೆಯ ಮೂಲಕವೂ ಮೆರವಣಿಗೆ ಸಾಗಲಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಶೋಭಾಯಾತ್ರಿಗೆ ಪ್ರತಿಯಾಗಿ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ‘ಸಂವಿಧಾನ ರಕ್ಷಣಾ ಸೌಹಾರ್ದ ರಥಯಾತ್ರೆ’ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಟಿ. ನರಸೀಪುರದಲ್ಲಿ ಎರಡೂ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಕುರಿತು ಕುತೂಹಲ ಮೂಡಿದೆ.
ಇದೇ ವೇಳೆ ಇನ್ಸ್ಪೆಕ್ಟರ್ ಧನಂಜಯ ಅವರ ಹೇಳಿಕೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಿದ್ದ ಸ್ಥಳೀಯ ವಾಹಿನಿಯ ಮುಖ್ಯಸ್ಥ ಮಂಜುನಾಥ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಮಾಜದ ಶಾಂತಿಗೆ ಭಂಗ ಉಂಟುಮಾಡುವ ರೀತಿಯಲ್ಲಿ ವಿಡಿಯೋವನ್ನು ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ತಾವು ಯಾವುದೇ ವಿಡಿಯೋವನ್ನು ತಿರುಚಿಲ್ಲ. ಇನ್ಸ್ಪೆಕ್ಟರ್ ಹೇಳಿದ್ದನ್ನೇ ಯಥಾವತ್ತಾಗಿ ಪ್ರಸಾರ ಮಾಡಿರುವುದಾಗಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.