ಮೈಸೂರು: ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಹಿಂದೂ ಜಾಗರಣ ವೇದಿಕೆ ತಿರುಗೇಟು ನೀಡಿದೆ. ಸೆಪ್ಟೆಂಬರ್ 18ರಂದು ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಭವ್ಯ ಗಣೇಶ ಶೋಭಾಯಾತ್ರೆ ನಡೆಸುವುದಾಗಿ ಸಂಘಟನೆ ಘೋಷಿಸಿದೆ.
ಟಿ. ನರಸೀಪುರದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಹಿಂದೂ ಮಹಾಗಣಪತಿಯನ್ನು ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿದೆ. ಈ ನಡುವೆ, ಮಸೀದಿ ಇರುವ ಲಿಂಕ್ ರಸ್ತೆಯಲ್ಲಿ ಗಣೇಶ ಮೆರವಣಿಗೆ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಇನ್ಸ್‌ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಿಂದೂ ಜಾಗರಣ ವೇದಿಕೆ ಮುಖಂಡ ಮಹೇಶ್, “ಇನ್ಸ್‌ಪೆಕ್ಟರ್ ಧನಂಜಯ್ ಅವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಸೆಪ್ಟೆಂಬರ್ 18ರಂದು ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ” ಎಂದು ಹೇಳಿದ್ದಾರೆ.
ಇದು ಐತಿಹಾಸಿಕ ಮೆರವಣಿಗೆಯಾಗಲಿದ್ದು, ಇನ್ಸ್‌ಪೆಕ್ಟರ್ ಧನಂಜಯ್ ಅವರು ಅದನ್ನು ಕಣ್ಣಾರೆ ನೋಡಲಿ ಎಂದು ಮಹೇಶ್ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯಿಂದ ಟಿ. ನರಸೀಪುರದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಸಂಘಟನೆಗಳ ನಡುವಿನ ಸಂಘರ್ಷದ ವಾತಾವರಣ ಮತ್ತಷ್ಟು ತೀವ್ರಗೊಂಡಿದೆ.