Search


ಕೊಲ್ಲೂರಿಗೆ ಸಿಎಂ ವಿಜಯ್‌ ಆಗಮನ; ಭಕ್ತರಿಗಿಲ್ಲ ಮೂಕಾಂಬಿಕೆ ದರ್ಶನ ಭಾಗ್ಯ..!

ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ನಟ ಜೋಸೆಫ್‌ ವಿಜಯ್‌(CM Vijay) ನಾಳೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ (Kollur Temple ಆಗಮಿಸುತ್ತಿದ್ದು. ಇದರ ಹಿನ್ನಲೆಯಲ್ಲಿ ನಾಳೆ ಮಧ್ಯಾಹ್ನ 12ರಿಂದ ಸಂಜೆ 5 ಗಂಟೆವರೆಗೆ ಭಕ್ತರ ದರ್ಶನವನ್ನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ..

ಜೂನ್ 12ರಂದು ತಮಿಳುನಾಡು ಸಿಎಂ ವಿಜಯ್ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಸಂಚರಿಸುವ ಮಾರ್ಗದಲ್ಲಿ, ದೇವಸ್ಥಾನದ ಸುತ್ತಮುತ್ತಲು ಬಿಗಿ ಬಂದೋಬಸ್ತು ಕಲ್ಪಿಸಲಾಗಿದೆ. ವಿಜಯ್ ದೇವಸ್ಥಾನ ಭೇಟಿ ಬಳಿಕ ಹಿಂತಿರುಗಲಿದ್ದಾರೆ. ಯಾವುದೇ ಸಾರ್ವಜನಿಕ ಭೇಟಿಯ ಕಾರ್ಯಕ್ರಮ ಇಲ್ಲ ಎಂದು ಪೊಲೀಸ್ ಇಲಾಖೆ ನಾಗರಿಕರು ಹಾಗೂ ಭಕ್ತರಿಗೆ ಸೂಚನೆ ನೀಡಿದೆ.

ವಾಹನ ಸಂಚಾರದ ಕಾನ್ವಾಯ್ ಹಾದಿ, ಪ್ರವೇಶ ದ್ವಾರ ಅಥವಾ ದೇವಸ್ಥಾನದ ಆವರಣದಲ್ಲಿ ಗುಂಪು ಸೇರಬಾರದು, ಜನಸಂದಣಿ ಮಾಡಬಾರದು. ವಿಶೇಷ ಬಂದೋಬಸ್ತು ಇರುವುದರಿಂದ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಭಕ್ತಾದಿಗಳು ದರ್ಶನ ತಪ್ಪಿಸುವುದು ಸೂಕ್ತ. ತಮಿಳುನಾಡು ಸಿಎಂ ಭೇಟಿ ಹಿನ್ನೆಲೆಯಲ್ಲಿ ದರ್ಶನದ ವೇಳೆ ಅನಾನುಕೂಲವಾಗಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ವಿಜಯ್‌ಗೂ ಮೊದಲು ಮಾಜಿ ಸಿಎಂ ಎಂ. ಜಿ. ರಾಮಚಂದ್ರನ್, ಜಯಲಲಿತಾ ಸೇರಿದಂತೆ ತಮಿಳಿನಾಡಿನ ಹಲವು ರಾಜಕೀಯ ಗಣ್ಯರು ಕೊಲ್ಲೂರಿಗೆ ಭೇಟಿ ನೀಡಿದ್ದು, ಎಂಜಿಆರ್‌ ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನ ಅರ್ಪಿಸಿದ್ದರು. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ಒಂದು ಕೆಜಿ ತೂಕದ ಚಿನ್ನದ ಖಡ್ಗವನ್ನು ನೀಡಿದ್ದರು.

By Ravikumar - 11-06-2026


Ads in Post