ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ಮುಖ್ಯಮಂತ್ರಿ ವಿರುದ್ಧ KPSC ಹಗರಣದ ವಿಚಾರವನ್ನು ಪ್ರಸ್ತಾಪಿಸಿದರು. ದೆಹಲಿಗೆ ಬಂದು NEET ಪರೀಕ್ಷೆ ಕುರಿತು ಪ್ರತಿಭಟನೆ ನಡೆಸುವ ಮುಖ್ಯಮಂತ್ರಿ, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ KPSC ಹಗರಣದ ವಿರುದ್ಧ ಪ್ರತಿಭಟಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳ ನೋವಿಗೆ ಏಕೆ ಸ್ಪಂದಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ತೇಜಸ್ವಿ ಸೂರ್ಯ, KPSC ಅಧ್ಯಕ್ಷರ ಅಮಾನತು, ನಕಲಿ ದಾಖಲೆಗಳ ಆರೋಪ ಹಾಗೂ ವೆಟರ್ನರಿ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳನ್ನು ಉಲ್ಲೇಖಿಸಿ, ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಿಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ನ್ಯಾಯಯುತ ಪರೀಕ್ಷಾ ವ್ಯವಸ್ಥೆ ಮತ್ತು ಶಾಶ್ವತ ಪರಿಹಾರವೇ ಮುಖ್ಯ ಎಂದು ಹೇಳಿದರು.
ಪೇಪರ್ ಲೀಕ್ ಪ್ರಕರಣಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆಯೇ ಬದುಕು ಕಟ್ಟಿಕೊಳ್ಳುವ ಪ್ರಮುಖ ಅವಕಾಶವಾಗಿದ್ದು, ಅದನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅವರು ಹೇಳಿದರು. ಒಂದು ದಿನದ ಪರೀಕ್ಷೆ ವಿದ್ಯಾರ್ಥಿಯ ಸಂಪೂರ್ಣ ಭವಿಷ್ಯವನ್ನು ನಿರ್ಧರಿಸಬಾರದು; ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಯ ಉದ್ದೇಶವೂ ಇದೇ ಎಂದು ಹೇಳಿದ ತೇಜಸ್ವಿ ಸೂರ್ಯ, ವಿದ್ಯಾರ್ಥಿಗಳು ಸುಲಭ ಪರೀಕ್ಷೆ ಕೇಳುತ್ತಿಲ್ಲ; ಬದಲಿಗೆ ಗುಣಮಟ್ಟದ, ನವೀನ ಹಾಗೂ ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ ಎಂದು ತಿಳಿಸಿದರು. ಪೇಪರ್ ಲೀಕ್ ತಡೆಯಲು ಸರ್ಕಾರ ಕಠಿಣ ಕಾನೂನು ತರಲು ಮುಂದಾಗಿರುವಾಗ, ಅದಕ್ಕೆ ಸಹಕಾರ ನೀಡುವ ಬದಲು ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಅವರು ಆರೋಪಿಸಿದರು.