ಪಶ್ಚಿಮ ಬಂಗಾಳ : ಕಾಲೇಜು ಅಂದ ಮೇಲೆ ಕ್ಲಾಸ್ ರೂಂ ಇರೋದನ್ನ ಕೇಳಿರುತ್ತೀರಾ, ಆದರೆ ಕೊಲ್ಕತ್ತಾದ ಕಾಲೇಜ್ ಒಂದರಲ್ಲಿ ಬೆಡ್ ರೂಂ ಪತ್ತೆಯಾಗಿದ್ದು, ಪತ್ತೆಯಾದ ರೂಮಿನಲ್ಲಿ 1 ಕೋಟಿ ನಗದು ಪತ್ತೆಯಾಗಿದೆ, ಅಷ್ಟೇ ಅಲ್ಲದೆ ಕೊಠಡಿಯಲ್ಲಿ ಒಂದು ರಿವಾಲ್ವರ್ ಮತ್ತು ಕಾಂಡೋಮ್ ಪ್ಯಾಕೆಟ್‌ಗಳು ಕೂಡ ಪತ್ತೆಯಾಗಿವೆ, ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೋಲ್ಕತ್ತಾ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಕಾಲೇಜುಗಳಲ್ಲಿ ಒಂದಾದ ಸುರೇಂದ್ರನಾಥ್ ಕಾಲೇಜಿನಲ್ಲಿ ಬೆಡ್ ರೂಮ್ ಪತ್ತೆಯಾಗಿದೆ, ಮಳೆಗಾಲಕ್ಕೂ ಮುನ್ನ ಡೆಂಗ್ಯೂ ತಡೆಗಟ್ಟಲು ಪುರಸಭೆಯ ಆರೋಗ್ಯಧಿಕಾರಿಗಳ ತಂಡ ಕಾಲೇಜಿನಲ್ಲಿ ಸ್ವಚ್ಚತಾ ಕಾರ್ಯ ನಡೆಸಲು ಬಂದಿತ್ತು. ಈ ವೇಳೆ ಬೀಗ ಹಾಕಿದ್ದ ಈ ಕೊಠಡಿಯನ್ನ ಕಾಲೇಜು ಆಡಳಿತ ಮಂಡಳಿಯ ಸಮ್ಮುಖದಲ್ಲಿ ಬೀಗ ತೆಗೆದು ಪರಿಶೀಲಿಸಿದಾಗ, ಕೊಠಡಿಯ ಅಲ್ಮೇರಾದಲ್ಲಿ 500 ಮತ್ತು 100 ರೂ ಮುಖಬೆಲೆಯ ನೋಟುಗಳ ಎರಡು ಚೀಲ ಪತ್ತೆಯಾಗಿದೆ.
ದೀರ್ಘಕಾಲದಿಂದ ಕೊಠಡಿ ಮುಚ್ಚಿದ್ದರಿಂದ ಹೆಚ್ಚಿನ ನೋಟುಗಳನ್ನು ಗೆದ್ದಲು ತಿಂದು ಹಾಳಾಗಿದ್ದು. ಜೊತೆಗೆ ಮದ್ಯದ ಬಾಟಲಿಗಳು, ಕಾಂಡೋಮ್ ಪ್ಯಾಕೆಟ್‌ಗಳು ಕೂಡಾ ಸಿಕ್ಕಿವೆ. ಇದರ ಜೊತೆಗೆ, ಕಾಲೇಜಿನ ಮತ್ತೊಂದು ಭಾಗದಲ್ಲಿ ಕೆಲವು ಸೂಟ್‌ಕೇಸ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಭಾಗಶಃ ಹಾನಿಗೊಳಗಾದ ಅಥವಾ ಸುಟ್ಟ ಸ್ಥಿತಿಯಲ್ಲಿರುವ ಹಳೆಯ ಕರೆನ್ಸಿ ನೋಟುಗಳು ಕಂಡುಬಂದಿವೆ. ಕಾಲೇಜು ಆಡಳಿತ ಮಂಡಳಿಯು ಈ ವಿಷಯದಲ್ಲಿ ಯಾವುದೇ ವಿಳಂಬ ಮಾಡದೆ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು, ಮುಚಿಪರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಹಣ ಹಾಗೂ ಪತ್ತೆಯಾದ ಹಳೆಯ ವೋಚರ್‌ಗಳನ್ನು ವಶಕ್ಕೆ ಪಡೆದುಕೊಂಡು, ಪಾರದರ್ಶಕ ತನಿಖೆಯನ್ನು ಆರಂಭಿಸಿದ್ದಾರೆ.
ಒಂದು ವರ್ಷದ ಹಿಂದೆ ಕೊಠಡಿಗೆ ಬೀಗ...!
2019 ರಿಂದ ಕ್ಯಾಂಪಸ್ ಚುನಾವಣೆಗಳು ನಡೆಯದ ಕಾರಣ, ಕಾಲೇಜುಗಳಲ್ಲಿನ ವಿದ್ಯಾರ್ಥಿ ಸಂಘ ಕೊಠಡಿಗಳನ್ನು ಮುಚ್ಚುವಂತೆ ಕಲ್ಕತ್ತಾ ಹೈಕೋರ್ಟ್ ಆಗಿನ ಟಿಎಂಸಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರ ಅನ್ವಯ ಸರ್ಕಾರ 2025ರಲ್ಲಿ ಕೊಠಡಿಯ ಬಾಗಿಲನ್ನ ಮುಚ್ಚಿತ್ತು. ಇನ್ನು ಕಾಲೇಜಿನಲ್ಲಿ ರೂಂ ಪತ್ತೆಯಾಗಿರುವುದಕ್ಕೆ ಕಾಲೇಜಿನ ಪ್ರಾಂಶುಪಾಲರು ಪ್ರತಿಕ್ರಿಯೆ ನೀಡಿದ್ದು ಇಲ್ಲಿ ಬೆಡ್ ರೂಮಿರುವುದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ತಪಾಸಣೆಯ ವೇಳೆ, ಕಾಲೇಜಿನ ಹೊಸ ಕಟ್ಟಡದ ಐದನೇ ಮಹಡಿಯಲ್ಲಿರುವ ಎರಡು ಬೀಗ ಹಾಕಿದ ಕೊಠಡಿಗಳನ್ನು ಪ್ರಾಂಶುಪಾಲರ ಸಮ್ಮುಖದಲ್ಲಿ ತೆರೆಯಲಾಯಿತು. ಈ ಕೊಠಡಿಗಳಲ್ಲಿ ಹಾಸಿಗೆಗಳು, ಕಪಾಟುಗಳು ಹಾಗೂ ಮೇಜು-ಕುರ್ಚಿಗಳಿರುವುದು ಕಂಡುಬಂದಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಬೇಕಾದ ಈ ಕೊಠಡಿಗಳಲ್ಲಿ ವಸತಿ ಮಾದರಿಯ ಪೀಠೋಪಕರಣಗಳು ಪತ್ತೆಯಾಗಿರುವುದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಈ ಎಲ್ಲಾ ಕೊಠಡಿಗಳನ್ನು ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಹೆಚ್ಚುವರಿ ಕ್ಲಾಸ್‌ರೂಮ್‌ಗಳನ್ನಾಗಿ ಮಾತ್ರ ಬಳಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಪತ್ತೆಯಾದ ಹಣದ ಮೂಲ ಮತ್ತು ವೋಚರ್‌ಗಳ ಕುರಿತು ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತ ತನಿಖೆ ನಡೆಸುತ್ತಿವೆ. ಶಾಸಕ ಸಜಲ್ ಘೋಷ್ ಸೇರಿದಂತೆ ಪ್ರಮುಖ ನಾಯಕರು ಈ ತನಿಖೆಯನ್ನು ಸ್ವಾಗತಿಸಿದ್ದು, ಇದು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸುಧಾರಣೆ ಮತ್ತು ವ್ಯವಸ್ಥಿತ ಪಾರದರ್ಶಕತೆಯನ್ನು ತರಲು ಉತ್ತಮ ಅವಕಾಶ ಎಂದು ಆಶಿಸಿದ್ದಾರೆ.