ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಣಾಮ ಅದರ ಗಂಭೀರತೆ ಭಾರತದಲ್ಲೂ ಗೋಚರಿಸಿದೆ. ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಗಂಡಕ್ ನದಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿದ್ದು, ಅವುಗಳಲ್ಲಿ ಇಬ್ಬರು ಮಹಿಳೆಯರ ಶವಗಳಿವೆ. ನೇಪಾಳದ ಪ್ರವಾಹದ ರಭಸಕ್ಕೆ ಈ ಶವಗಳು ಸುಮಾರು 150 ಕಿ.ಮೀ. ದೂರ ಕೊಚ್ಚಿಕೊಂಡು ಬಂದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಗಂಡಕ್ ನದಿಯಲ್ಲಿ ಗಸ್ತು ನಡೆಸುತ್ತಿದ್ದ SSB ಸಿಬ್ಬಂದಿ ಮೃತದೇಹಗಳನ್ನು ಗಮನಿಸಿ ಮೋಟಾರ್ ಬೋಟ್ ಮೂಲಕ ಹೊರತೆಗೆದು ಶವಾಗಾರಕ್ಕೆ ರವಾನಿಸಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಕುಟುಂಬಸ್ಥರನ್ನು ಪತ್ತೆಹಚ್ಚಲು ಭಾರತೀಯ ಅಧಿಕಾರಿಗಳು ನೇಪಾಳದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
ಮಹಾರಾಜ್ಗಂಜ್, ಕುಶಿನಗರ ಸೇರಿದಂತೆ ನದಿ ಪಾತ್ರದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, NDRF ತಂಡಗಳನ್ನೂ ನಿಯೋಜಿಸಲಾಗಿದೆ. ಗಂಡಕ್ ನದಿಯಲ್ಲಿ ನೀರಿನ ಹರಿವು ಅಪಾಯಕಾರಿ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಶವಗಳು ಅಥವಾ ಪ್ರವಾಹದ ಪರಿಣಾಮಗಳು ಭಾರತಕ್ಕೆ ತಲುಪುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.