ಚಿಕ್ಕಬಳ್ಳಾಪುರ: ನಗರದಲ್ಲಿ ಕುಳಿತು ಭಯೋತ್ಪಾದನೆಗೆ ಪಿತೂರಿ ನಡೆಸುತ್ತಿದ್ದ ಆರೋಪದ ಮೇಲೆ ಬಾಪೂಜಿನಗರದ ನಿವಾಸಿ ಶಬ್ಬೀರ್ ಎಂಬಾತನನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಪಿಯ ಚಟುವಟಿಕೆಗಳ ಕುರಿತು ಹಲವು ಮಹತ್ವದ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರಾಜ್ಯ ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಆಧಾರದ ಮೇಲೆ ಶಬ್ಬೀರ್‌ನನ್ನು ಬಂಧಿಸಿದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್‌ಸ್ಟಾಗ್ರಾಂ ಚಟುವಟಿಕೆಯಿಂದ ಪೊಲೀಸರಿಗೆ ಅನುಮಾನ
ಶಬ್ಬೀರ್ ಸಾಮಾಜಿಕ ಜಾಲತಾಣದಲ್ಲಿ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಪೋಸ್ಟ್‌ಗಳಿಗೆ ಲೈಕ್ ಹಾಗೂ ಕಾಮೆಂಟ್ ಮಾಡುತ್ತಿದ್ದ ಎನ್ನಲಾಗಿದೆ. ಈ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡ ರಾಜ್ಯ ಗುಪ್ತಚರ ಇಲಾಖೆ ಆತನ ಇನ್‌ಸ್ಟಾಗ್ರಾಂ ಖಾತೆಯ ಮೇಲೆ ನಿಗಾ ಇಟ್ಟು ಮಾಹಿತಿ ಸಂಗ್ರಹಿಸಿತ್ತು. ಬಳಿಕ ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಶಬ್ಬೀರ್ ಬಂಧನಕ್ಕೆ ಕಾರ್ಯಾಚರಣೆ ರೂಪಿಸಿದ್ದರು. ಅದರಂತೆ ಆತನನ್ನು ವಶಕ್ಕೆ ಪಡೆದು ಮೊಬೈಲ್ ಫೋನ್ ಪರಿಶೀಲನೆ ನಡೆಸಲಾಗಿದೆ. ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಭಯೋತ್ಪಾದನೆಗೆ ಸಂಬಂಧಿಸಿದ ಪಿತೂರಿ ನಡೆಸಿರುವ ಶಂಕೆಗೆ ಕಾರಣವಾಗುವ ಮಾಹಿತಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಲೋಸ್ಡ್ ಗ್ರೂಪ್‌ನಲ್ಲಿ ಪ್ರಚೋದನಕಾರಿ ಸಂದೇಶ
ಚಿಕ್ಕಬಳ್ಳಾಪುರ ಎಸ್ಪಿ ಪದ್ಮಿನಿ ಸಾಹು ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣದ ಕ್ಲೋಸ್ಡ್ ಗ್ರೂಪ್‌ನಲ್ಲಿ ಪ್ರಚೋದನಕಾರಿ ಸಂದೇಶಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಈ ಸಂದೇಶಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಪಿಯ ಹಿನ್ನೆಲೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಅಗತ್ಯವಿದೆ. ಶಬ್ಬೀರ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಮೊಬೈಲ್‌ನಲ್ಲಿ ನಡೆದಿರುವ ಚರ್ಚೆಗಳು ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಪೂರ್ಣವಾಗಿ ಸಂಗ್ರಹಿಸಿ ತನಿಖೆ ಮುಂದುವರಿಸಲಾಗುವುದು ಎಂದು ಎಸ್ಪಿ ಪದ್ಮಿನಿ ಸಾಹು ತಿಳಿಸಿದ್ದಾರೆ.