ಮ್ಯಾಂಚೆಸ್ಟರ್: IPLನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಮಾಲ್ ಮಾಡಿದ್ದ ಬೇಬಿ ಬಾಸ್ ವೈಭವ್ ಸೂರ್ಯವಂಶಿ (Vaibhav Sooryavanshi) ಟೀಂ ಇಂಡಿಯಾ ಪರ ಅಂತರ್ ರಾಷ್ಟ್ರೀಯ ಕ್ರಿಕೆಟ್ಗೆ ಕಡೆಗೂ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ.
ವೈಭವ ಸೂರ್ಯವಂಶಿ ಕೇವಲ 15ನೇ ವಯಸ್ಸಿಗೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ 2ನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತಂಡಕ್ಕೆ ಪದಾರ್ಪಣೆ ಮಾಡಿದರು. ಉಪನಾಯಕ ತಿಲಕ್ ವರ್ಮಾ, ವೈಭವ್ಗೆ ಕ್ಯಾಪ್ ನೀಡಿ ಸ್ವಾಗತಿಸಿದರು.
ಈ ಮೂಲಕ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ (15 ವರ್ಷ 99 ದಿನ) ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿದರು. ಸಚಿನ್ ತೆಂಡೂಲ್ಕರ್ ನವೆಂಬರ್ 15, 1989 ರಂದು ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಆಗ ಅವರಿಗೆ 16 ವರ್ಷ 205 ದಿನ ವಯಸ್ಸಾಗಿತ್ತು. ಅಷ್ಟೇ ಅಲ್ಲದೇ 15 ವರ್ಷ 239 ದಿನಗಳ ವಯಸ್ಸಿನಲ್ಲಿದ್ದಾಗ ಭಾರತೀಯ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡಿದ ಶಫಾಲಿ ವರ್ಮಾ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ ವೈಭವ್.