Search


ಸಿಂಹ ಸುಮ್ಮನೆ ಕುಳಿತಿಲ್ಲ, ಮುಂದಿನ ಬೇಟೆಗೆ ಸಿದ್ದವಾಗಿದೆ; ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸಂದೇಶ

ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 2ರಂದು ನಡೆಯಲಿದೆ. ಪ್ರತಿವರ್ಷ ಸುದೀಪ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಸುದೀಪ್ ಅವರ ನಿವಾಸದ ಬಳಿ ಜಮಾಯಿಸುವ ಅಭಿಮಾನಿಗಳು ಕೇಕ್ ಕತ್ತರಿಸಿ, ಹಾರ ಹಾಕಿ, ಉಡುಗೊರೆ ನೀಡಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಾರೆ. ಆದರೆ ಈ ಬಾರಿ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಅವರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಸುದೀಪ್, ಸೆಪ್ಟೆಂಬರ್ 2 ಎನ್ನುವುದು ಕೇವಲ ಒಂದು ದಿನಾಂಕವಾಗಿದ್ದರೂ, ಕಳೆದ 30 ವರ್ಷಗಳಿಂದ ಅದನ್ನು ಸಂಭ್ರಮವನ್ನಾಗಿ ಮಾಡಿದ್ದು ಅಭಿಮಾನಿಗಳ ಅಪಾರ ಪ್ರೀತಿ ಎಂದು ಹೇಳಿದ್ದಾರೆ. ತಮ್ಮ ಸಿನಿಮಾಗಳು, ಬಿಗ್‌ಬಾಸ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಅಭಿಮಾನಿಗಳು ನೀಡಿದ ಪ್ರೀತಿ ಮತ್ತು ಬೆಂಬಲವೇ ತಮ್ಮ ದೊಡ್ಡ ಶಕ್ತಿ ಎಂದು ತಿಳಿಸಿದ್ದಾರೆ.

ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ವೈಯಕ್ತಿಕ ಹಾಗೂ ಬಲವಾದ ಕಾರಣಗಳಿವೆ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಮನಸ್ಸು ತುಂಬಿ ಸಂಭ್ರಮಿಸಲು ಸಾಧ್ಯವಾಗದಿದ್ದರೆ ಅಂತಹ ಆಚರಣೆ ತಮ್ಮ ಪಾಲಿಗೆ ಅರ್ಥಪೂರ್ಣವಾಗುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ ತಮ್ಮ ಊರುಗಳಲ್ಲಿ ಅಭಿಮಾನಿಗಳು ನಡೆಸುವ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನೇ ತಮ್ಮ ಹುಟ್ಟುಹಬ್ಬದ ಆಚರಣೆಯಾಗಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲ, ಸೆಪ್ಟೆಂಬರ್ 2ರಂದು ತಮ್ಮ ಮನೆಯ ಬಳಿಯೂ ತಾವು ಯಾರಿಗೂ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಗದ್ದಲ ಮಾಡಬಾರದು ಎಂದು ಈ ಹಿಂದೆಯೂ ಮನವಿ ಮಾಡಿದ್ದ ಸುದೀಪ್, ತಮಗೆ ನೀಡಬೇಕೆಂದುಕೊಂಡಿರುವ ಉಡುಗೊರೆಗಳನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬಳಸುವಂತೆ ಮನವಿ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತಾವು 30 ವರ್ಷಗಳನ್ನು ಅರ್ಪಿಸಿಕೊಂಡಿದ್ದು, ಸಿನಿಮಾ ತಮ್ಮ ಪರಮ ಕಾಯಕ ಎಂದು ಸುದೀಪ್ ಹೇಳಿದ್ದಾರೆ. ಕೆಲವೊಮ್ಮೆ ಸಿನಿಮಾಗಳು ತಡವಾಗುವುದಕ್ಕೂ ಕಾರಣಗಳಿರುತ್ತವೆ ಎಂದು ತಿಳಿಸಿರುವ ಅವರು, “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಮ್ಮನೆ ಕುಳಿತಿದೆ ಎಂದಲ್ಲ, ಮುಂದಿನ ಬೇಟೆಗೆ ಸಿದ್ಧವಾಗಿದೆ” ಎಂಬ ತಮ್ಮದೇ ಸಿನಿಮಾದ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.

ಯಾವುದೇ ವೇದಿಕೆ ಅಥವಾ ಕಾರ್ಯಕ್ರಮದಲ್ಲಿದ್ದರೂ ಕನ್ನಡಿಗರನ್ನು ರಂಜಿಸುವುದು ಮತ್ತು ಕನ್ನಡವನ್ನು ಸಂಭ್ರಮಿಸುವುದೇ ತಮ್ಮ ಉದ್ದೇಶ ಎಂದು ಹೇಳಿರುವ ಸುದೀಪ್, “ಕನ್ನಡ ನನ್ನ ಸತ್ವ, ಕನ್ನಡದಿಂದ ನಾನು ನಿತ್ಯ” ಎಂಬ ಮಾತಿನ ಮೂಲಕ ಕನ್ನಡದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳನ್ನು ರಂಜಿಸುವ ವಿಚಾರದಲ್ಲಿ ತಾವು ಎಂದಿಗೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗುವುದಿಲ್ಲ ಎಂದು ಹೇಳಿರುವ ಕಿಚ್ಚ, ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಅಭಿಮಾನಿಗಳು ಹೆಜ್ಜೆ ಗುರುತಾಗಿ ಜೊತೆಯಲ್ಲಿದ್ದಾರೆ ಎಂದು ಭಾವುಕರಾಗಿದ್ದಾರೆ. ಜೀವನದಲ್ಲಿ ಹೂವು-ಮುಳ್ಳು ಎರಡೂ ಇದ್ದರೂ, ಅಭಿಮಾನಿಗಳ ಪ್ರೀತಿ ಮಾತ್ರ ಎಂದಿಗೂ ಮುಳ್ಳಲ್ಲ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ.

By Ravikumar - 27-08-2026


Ads in Post