ಚಿತ್ರದುರ್ಗ: ನಗರದ ಕೆಳಗೋಟೆ ಬಡಾವಣೆಯಲ್ಲಿರುವ ಎರಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಶಾಲೆಗಳ ದುಸ್ಥಿತಿಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ನಿತ್ಯ ಆತಂಕದಲ್ಲೇ ದಿನ ಕಳೆಯುವಂತಾಗಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಕೂಗಳತೆಯಷ್ಟು ದೂರದಲ್ಲೇ ಈ ಪರಿಸ್ಥಿತಿ ಕಂಡುಬರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ದೇಶದೆಲ್ಲಡೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುತ್ತೇವೆ ಎಂದು ಹೋರಾಟ ಮಾಡ್ತಿರುವ ಕಾಕ್ರೋಚ್ ಪಾರ್ಟಿಗೆ, ರಾಜ್ಯದಲ್ಲಿರುವ ಈ ಶಾಲೆಗಳು ಕಣ್ಣಿಗೆ ಕಾಣ್ತಿಲ್ವ ಎಂಬ ಪ್ರಶ್ನೆಯು ಮೂಡುತ್ತಿದೆ.
ಕೆಳಗೋಟೆಯ ಸಿಕೆ ಪುರ ಸರ್ಕಾರಿ ಶಾಲೆಯಲ್ಲಿ 43 ಹಾಗೂ ಬಾರ್ಲೈನ್ ರಸ್ತೆಯ ಶಾಲೆಯಲ್ಲಿ 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಎರಡೂ ಶಾಲೆಗಳ ಕಟ್ಟಡಗಳ ಮೇಲ್ಛಾವಣಿಯ ಸಿಮೆಂಟ್ ಪದರಗಳು ಉದುರುತ್ತಿದ್ದು, ಗೋಡೆಗಳು ಹಾಗೂ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಹಲವು ಕೊಠಡಿಗಳು ಬಳಕೆಗೆ ಯೋಗ್ಯವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೆಲವೇ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.
ಶಾಲೆಗೆ ತೆರಳುವ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುತ್ತಾರೆಯೇ ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ. ಕಟ್ಟಡದ ಸ್ಥಿತಿ ಕಂಡು ಭಯಗೊಂಡಿರುವ ಹಲವು ಪೋಷಕರು ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇದರಿಂದ ಶಾಲೆಗಳ ವಿದ್ಯಾರ್ಥಿ ದಾಖಲಾತಿಯ ಮೇಲೂ ಪರಿಣಾಮ ಬೀರುತ್ತಿದೆ.
ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಮಾತನಾಡಿ, ಮೇಲಧಿಕಾರಿಗಳು ಹಲವು ಬಾರಿ ಶಾಲೆಗೆ ಭೇಟಿ ನೀಡಿ ಕಟ್ಟಡದ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಆದರೆ ಈವರೆಗೆ ಹೊಸ ಕೊಠಡಿಗಳ ನಿರ್ಮಾಣವಾಗಲಿ, ಶಿಥಿಲ ಕಟ್ಟಡದ ದುರಸ್ತಿಯಾಗಲಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಸಜ್ಜಿತ ಹಾಗೂ ಸುರಕ್ಷಿತ ಕಟ್ಟಡ ನಿರ್ಮಾಣವಾದರೆ ಮಾತ್ರ ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.