ಮೈಸೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಅವರು ನೀಡಿದ ಎಚ್ಚರಿಕೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ. ಧನಂಜಯ್ ಯಾವುದೇ ತಪ್ಪು ಮಾಡಿಲ್ಲ. ಅವರು ಕೇವಲ ಬುದ್ಧಿವಾದ ಹೇಳಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ಧಿವಾದ ಹೇಳುವ ಧಾಟಿ ಸ್ವಲ್ಪ ಬದಲಾಗಿರಬಹುದು. ಅದನ್ನು ಹೊರತುಪಡಿಸಿದರೆ ಇನ್ಸ್‌ಪೆಕ್ಟರ್ ಯಾವುದೇ ತಪ್ಪು ಮಾಡಿಲ್ಲ. ಹೀಗಿರುವಾಗ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದರು. ಸ್ಥಳೀಯ ಆಡಳಿತದ ಅನುಮತಿ ಪಡೆದುಕೊಂಡು ಮೆರವಣಿಗೆ ನಡೆಸಬಹುದು. ಅನುಮತಿ ಪಡೆಯದೆ ಮೆರವಣಿಗೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆದರೆ ಅದರ ಹೊಣೆ ಯಾರು ಹೊರುತ್ತಾರೆ? ಎಂಬ ಉದ್ದೇಶದಿಂದಲೇ ಇನ್ಸ್‌ಪೆಕ್ಟರ್ ಧನಂಜಯ್ ಮಾತನಾಡಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಯತೀಂದ್ರ ಸಿದ್ದರಾಮಯ್ಯ, ಕೋಮುಗಲಭೆ ನಡೆದರೆ ರಾಜಕೀಯ ಲಾಭ ಪಡೆಯಲು ಬಿಜೆಪಿ ಕಾಯುತ್ತಿದೆ ಎಂದು ಆರೋಪಿಸಿದರು. ಎಲ್ಲೆಲ್ಲಿ ಕೋಮುಗಲಭೆಗಳು ನಡೆಯುತ್ತವೆಯೋ ಅಲ್ಲಿ ಬಿಜೆಪಿಗೆ ಚುನಾವಣಾ ಲಾಭವಾಗುತ್ತದೆ ಎಂಬುದು ಅವರ ಆರೋಪವಾಗಿದ್ದು, ಟಿ. ನರಸೀಪುರದಲ್ಲೂ ಇದೇ ರೀತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.