Search


ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ; ದಿಡೀರ್ ದೆಹಲಿಗೆ ತೆರಳಿದ ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಗೆ ಉಪಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಗೈರುಹಾಜರಾಗಿದ್ದು, ಅವರು ದಿಢೀರ್ ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಫಡ್ನವಿಸ್ ಸರ್ಕಾರದ ಕಾರ್ಯವೈಖರಿ ಅಥವಾ ಬಿಜೆಪಿ ನಾಯಕತ್ವದ ಬಗ್ಗೆ ಶಿಂಧೆ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಆದರೆ, ಈ ಊಹಾಪೋಹಗಳನ್ನು ಶಿಂಧೆ ಹಾಗೂ ಬಿಜೆಪಿ ನಾಯಕರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ತಮ್ಮ ದೆಹಲಿ ಭೇಟಿಯ ಕುರಿತು ಸ್ಪಷ್ಟನೆ ನೀಡಿರುವ ಏಕನಾಥ್ ಶಿಂಧೆ, ವಿವಿಧ ರಾಜ್ಯಗಳ ಶಿವಸೇನೆ ಘಟಕಗಳ ಮುಖ್ಯಸ್ಥರನ್ನು ಭೇಟಿ ಮಾಡುವುದು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪಕ್ಷದ ಚಿಹ್ನೆ ಮತ್ತು ಆಂತರಿಕ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಹಿರಿಯ ವಕೀಲರೊಂದಿಗೆ ಚರ್ಚೆ ನಡೆಸುವುದು ಭೇಟಿಯ ಉದ್ದೇಶ ಎಂದು ತಿಳಿಸಿದ್ದಾರೆ. ಶಿಂಧೆ ಅವರ ದೆಹಲಿ ಪ್ರವಾಸ ಪೂರ್ವನಿಯೋಜಿತವಾಗಿತ್ತು. ಇದೇ ಕಾರಣದಿಂದ ಅವರು ಮಧ್ಯಾಹ್ನ ನಡೆದ ಸಚಿವ ಸಂಪುಟ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಮಹಾಯುತಿ ಮೈತ್ರಿಕೂಟದೊಳಗೆ ಯಾವುದೇ ಅಸಮಾಧಾನ ಅಥವಾ ಭಿನ್ನಾಭಿಪ್ರಾಯಗಳಿಲ್ಲ ಎಂದು ಶಿವಸೇನೆ ಮತ್ತು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ, ಪ್ರಮುಖ ಖಾತೆಗಳ ಮೇಲಿನ ಹಿಡಿತ ಹಾಗೂ ಮುಂಬರುವ ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯ ಸ್ಥಾನ ಹಂಚಿಕೆ ಕುರಿತು ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿಂಧೆ ಅವರ ದೆಹಲಿ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಶಿಂಧೆ ಅಥವಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರಾದ ಅಮಿತ್ ಶಾ ಅಥವಾ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಸಂದರ್ಭಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ನಡೆಯಲಿವೆಯೇ ಎಂಬ ಕುತೂಹಲ ಹೆಚ್ಚಾಗುವುದು ಸಾಮಾನ್ಯವಾಗಿದೆ. ಇದೀಗ ಶಿಂಧೆ ಅವರ ದೆಹಲಿ ಭೇಟಿ ಕೂಡ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

By Ravikumar - 02-09-2026


Ads in Post