Search


RSS ವಿರುದ್ಧ ಯಾವುದೇ ಕೇಸಿಲ್ಲ; ವಿಧಾನ ಪರಿಷತ್‌ನಲ್ಲಿ ಉತ್ತರಿಸಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು: RSS ಸಂಘಟನೆ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸದನದಲ್ಲಿ ಉತ್ತರಿಸಿದ್ದಾರೆ, ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ʻರಾಜ್ಯದಲ್ಲಿ ಆರ್‌ಎಸ್‌ಎಸ್‌ ವಿರುದ್ದ ಯಾವುದಾದರು ಗಲಭೆ ಪ್ರಕರಣಗಳಿವೆಯಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಆರ್‌ಎಸ್‌ಎಸ್‌ ವಿರುದ್ಧ ಯಾವುದೇ ಕೇಸಿಲ್ಲ ಎಂದು ಉತ್ತರಿಸಿದ್ದಾರೆ.

ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 524 ಅನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಳಿದ್ದರು. ರಾಜ್ಯದಲ್ಲಿ ಆರೆಸ್ಸೆಸ್ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ? ಸಂಘ ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ? ಪಥ ಸಂಚಲನದ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆ ದಾಖಲಾಗಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂದು ಒಂದೇ ವಾಕ್ಯದಲ್ಲಿ ಹೇಳಿದ್ದಾರೆ.

ಇನ್ನು ಪ್ರಿಯಾಂಕ್‌ ಖರ್ಗೆ ಅವರ ಈ ಉತ್ತರವನ್ನ ಆಯುಧವಾಗಿ ತೆಗೆದುಕೊಂಡಿರುವ ರಾಜ್ಯ ಬಿಜೆಪಿ ʻಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ರಾಜ್ಯದ ಗೃಹ ಸಚಿವರು ತಿಳಿಸಿದ್ದಾರೆ. ಆದ್ದರಿಂದ, ಇನ್ನಾದರೂ ನೀವು ಆರೆಸ್ಸೆಸ್ ವಿರುದ್ಧ ವಿಷ ಕಾರುವುದನ್ನು ನಿಲ್ಲಿಸಿ ಎಂದು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇನ್ನು ಈ ಕುರಿತು ಪರಿಷತ್‌ ಸದಸ್ಯ ಸಿ.ಟಿ ರವಿ ಟ್ವೀಟ್‌ ಮಾಡಿ, ವ್ಯಂಗ್ಯವಾಡಿದ್ದು ʻಪ್ರಿಯಾಂಕ್ ಖರ್ಗೆ ಅವರೇ, ರಾಜ್ಯದಲ್ಲಿ ಆರೆಸ್ಸೆಸ್ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ? ಸಂಘ ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ? ಪಥ ಸಂಚಲನದ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆ ದಾಖಲಾಗಿದೆಯೇ ಎನ್ನುವ ಪ್ರಶ್ನೆಗೆ ಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ರಾಜ್ಯದ ಗೃಹ ಸಚಿವರು ತಿಳಿಸಿದ್ದಾರೆ. ಆದ್ದರಿಂದ, ಇನ್ನಾದರೂ ನೀವು ಆರೆಸ್ಸೆಸ್ ವಿರುದ್ಧ ವಿಷ ಕಾರುವುದನ್ನು ನಿಲ್ಲಿಸಿ. ಓಹ್, ಮರೆತೇ ಹೋಗಿತ್ತು! ರಾಜ್ಯದ ಗೃಹ ಸಚಿವರೂ ತಾವೇ ಅಲ್ಲವೇ? ಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಆರೆಸ್ಸೆಸ್ ಯಾವುದೇ ಕಾನೂನು ವಿರೋಧಿ ಕಾರ್ಯ ನಡೆಸಿಲ್ಲ ಎನ್ನುವುದು ಸಾಬೀತಾಗಿದ್ದರಿಂದ, ಇನ್ನಾದರೂ ನೀವು ಆರೆಸ್ಸೆಸ್ ಬೆನ್ನು ಬಿಟ್ಟು, ರಾಜ್ಯದ ಕಾನೂನು ಸುವ್ಯವಸ್ಥೆಯತ್ತ ಕೊಂಚ ಗಮನ ಹರಿಸಬಹುದೇ? ಎಂದು ಸಿಟಿ ರವಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

By Ravikumar - 25-08-2026


Ads in Post