Search


ಮದುವೆಗಾಗಿ 17 ಕೋಟಿ ಪ್ಯಾಲೇಸ್‌; ಪ್ರೀ-ವೆಡ್ಡಿಂಗ್‌ ಶೂಟ್‌ ವೇಳೆ ಪ್ರಿಯಕರನ ಜೊತೆ ಸೇರಿ ಭಾವಿ ಪತಿಗೆ ಚಟ್ಟ ಕಟ್ಟಿದ ಯುವತಿ

ಮುಂಬೈ: ಪ್ರಿ-ವೆಡ್ಡಿಂಗ್ ಫೋಟೋಶೂಟ್‌ ನೆಪದಲ್ಲಿ ಯುವತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ(Maharashtra) ನಡೆದಿದೆ, ಮೃತ ಯುವಕನನ್ನ ಕೇತನ್‌ ಅಗರ್ವಾಲ್‌ ಎಂದು ಗುರುತಿಸಲಾಗಿದ್ದು. ಇನ್ನು ಕೊಲೆ ಮಾಡಿದ ನಂತರ ಯುವತಿ ತನ್ನ ಸ್ಟೇಟಸ್‌ನಲ್ಲಿ ಭಾವುಕವಾಗಿ ಪೋಸ್ಟ್‌ವೊಂದನ್ನ ಮಾಡಿದ್ದು ʻನನ್ನ ಹುಟ್ಟುಹಬ್ಬದಂದೇ ಬಿಟ್ಟು ಹೋದೆ. ಆದರೆ ನೀನು ಇಲ್ಲೇ ಇದ್ದೀಯಾ ಅಂತ ನನ್ನ ಮನಸ್ಸಿಗೆ ಗೊತ್ತುʼ ಎಂದು ಮೊಸಳೆ ಕಣ್ಣೀರು ಸುರಿಸಿದ್ದಾಳೆ.

ಮಹಾರಾಷ್ಟ್ರದ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಪುತ್ರ ಕೇತನ್ ಅಗರ್ವಾಲ್, ಜೂನ್ 18ರಂದು ಲೋನಾವಾಲಾ ಸಮೀಪದ ಲೋಹಗಢ ಕೋಟೆಗೆ ಭಾವಿ ಪತ್ನಿ ಸಿಯಾ ಗೋಯಲ್ ಜೊತೆ ಪ್ರಿ-ವೆಡ್ಡಿಂಗ್ ಶೂಟ್‌ಗೆ ತೆರಳಿದ್ದ. ಅಲ್ಲಿಗೆ ಆಕೆಯ ಪ್ರೇಮಿ ಚೇತನ್ ಕೂಡ ಬಂದಿದ್ದ. ಇಬ್ಬರೂ ಸೇರಿ ಕೋಟೆಯ ಮೇಲಿಂದ ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದ ಸಿಯಾ, ಜೋರಾಗಿ ಗಾಳಿ ಬೀಸುತ್ತಿದ್ದರಿಂದ ಕಾಲು ಜಾರಿ ಕೇತನ್ ಕೆಳಗೆ ಬಿದ್ದಿದ್ದಾನೆ ಎಂದು ಕಥೆ ಕಟ್ಟಿದ್ದಳು.

ಅನುಮಾನ ಮೂಡಿಸಿತ್ತು ಸಿಯಾ ನೀಡಿದ ಹೇಳಿಕೆ...!

ಪೊಲೀಸರು ತನಿಖೆ ಮುಂದುವರಿಸಿದಾಗ ಸಿಯಾ ನೀಡುತ್ತಿದ್ದ ಹೇಳಿಕೆಗಳಲ್ಲಿ ಅನುಮಾನ ಮೂಡಿದೆ. ನಂತರ ಆಕೆಯ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿದಾಗ ಚೇತನ್ ಚೌಧರಿಯೊಂದಿಗೆ ಸಂಬಂಧವಿರುವುದು ಬಯಲಾಗಿತ್ತು. ಸಿಯಾಳಿಗೆ ಮನೆಯವರು ನಿಶ್ಚಯಿಸಿದ್ದ ಕೇತನ್ ಜೊತೆ ಮದುವೆಯಾಗಲು ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಚೌಧರಿ ಜೊತೆ ಬಾಳಲು ಕೇತನ್ ಅಡ್ಡಿಯಾಗಿದ್ದಾನೆಂದು ಭಾವಿಸಿ ಇಬ್ಬರೂ ಸೇರಿ ಈ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ಕೋಟೆಯ ಮೇಲಿಂದ ಕೇತನ್‌ನನ್ನು ತಳ್ಳಿ ಕೊಲೆ ಮಾಡಿದ್ದರು.

Pune man dies after falling 400 feet during trek with fiancée ahead of  wedding

 

ಅದ್ದೂರಿ ಮದುವೆಗೆ 17 ಕೋಟಿಯ ಅರಮನೆ..!

ಸಿಯಾ ಮತ್ತು ಕೇತನ್‌ ಮದುವೆಯನ್ನ ಅದ್ದೂರಿಯಾಗಿ ಮಾಡಲು ಎರಡು ಕುಟುಂಬಗಳು ನಿಶ್ಚಯಿಸಿದ್ದವು. ಇದೇ ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಇಬ್ಬರ ಅದ್ಧೂರಿ ಮದುವೆ ನಿಗದಿಯಾಗಿತ್ತು. ಮದುವೆಗಾಗಿ 17 ಕೋಟಿ ರೂ. ವೆಚ್ಚದ ಅರಮನೆಯನ್ನು ಬುಕ್ ಮಾಡಲಾಗಿತ್ತು. ಅತಿಥಿಗಳಿಗಾಗಿ ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಆದ್ದರಿಂದ ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಜೀವನ ಸಾಗಿಸಲು ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಹತ್ಯೆಗೆ ಸಂಚು ರೂಪಿಸಿದ್ದಳು.

ಕೊಲೆ ನಡೆದ ಲೋಹಗಢ್ ಕೋಟೆಯು (Lohaghad Fort) ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಹೊಂದಿರುವ ಹಾಗೂ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಪ್ರಸಿದ್ಧ ತಾಣವಾಗಿದ್ದು, ಈ ಘಟನೆಯಿಂದ ಪ್ರವಾಸಿಗರಲ್ಲಿ ಆತಂಕವನ್ನುಂಟು ಮಾಡಿದೆ.

By Ravikumar - 24-06-2026


Ads in Post