ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಗಿದ ನಂತರ ಒಡೆದು ಹೋಳಾಗಿರುವ ಟಿಎಂಸಿಯನ್ನ ಕಾಂಗ್ರೆಸ್ ಜೊತೆ ವಿಲೀನ ಮಾಡಲು ಮಮತಾ ದೀದಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬಂಡಾಯಗಾರರಿಗೆ ಬುದ್ದಿ ಕಲಿಸಲು ದೀದಿ ಈ ನಿರ್ಧಾರಕ್ಕೆ ಕೈ ಹಾಕುತ್ತಿದ್ದು, ಇದಕ್ಕಾಗಿ ಕಾಂಗ್ರೆಸ್ ದೀದಿಗೆ ದೊಡ್ಡ ಆಫರ್ ಅನ್ನು ಕೂಡ ಕೊಟ್ಟಿದೆ ಎಂಬ ಮಾಹಿತಿ ಕೇಳಿ ಬಂದಿದೆ.
ತೃಣಮೂಲ ಕಾಂಗ್ರೆಸ್ನಲ್ಲಿ (TMC) ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಬಂಡಾಯಗಾರರಿಗೆ ಬುದ್ಧಿಕಲಿಸಲು ಮಮತಾ ಬ್ಯಾನರ್ಜಿ (Mamata Banerjee) ಟಿಎಂಸಿ ಪಕ್ಷವನ್ನ ಕಾಂಗ್ರೆಸ್ ಜೊತೆ ವಿಲೀನ ಮಾಡಲು ಮುಂದಾಗಿದ್ದಾರೆ ಅಂತ ಚರ್ಚೆ ಆಗ್ತಿದೆ. ಈ ಸಂಬಂಧ, ಸೋನಿಯಾ ಗಾಂಧಿ (Sonia Gandhi) ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದು, ಮಮತಾ ಬ್ಯಾನರ್ಜಿ ಸಮಯಾವಕಾಶ ಕೇಳಿದ್ದಾರೆ ಅಂತ ತಿಳಿದುಬಂದಿದೆ.
ವಿಲೀನ ವದಂತಿ ಬೆನ್ನಲ್ಲೇ ಟಿಎಂಸಿ ಸಂಸದ, ಮಮತಾ ಅಳಿಯ ಅಭಿಷೇಕ್ ಬ್ಯಾನರ್ಜಿ ಜೊತೆ ರಾಹುಲ್ ಗಾಂಧಿ ಒಂದು ತಾಸಿಗೂ ಹೆಚ್ಚುಕಾಲ ಚರ್ಚೆ ಮಾಡಿದ್ದಾರೆ. ಆದರೆ ಈ ವಿಲೀನಕ್ಕಾಗಿ ದೀದಿ ಕಾಂಗ್ರೆಸ್ ಮುಂದೆ ದೊಡ್ಡ ಬೇಡಿಕೆಯನ್ನ ಪ್ರಸ್ತಾಪಿಸಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಮತ್ತು ಅಭಿಷೇಕ್ ಬ್ಯಾನರ್ಜಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಬೇಕು ಎಂದು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಎಐಸಿಸಿ ಅಧ್ಯಕ್ಷ ಖರ್ಗೆ ಅವರು ನಾಳೆ ತುರ್ತು ಸಭೆ ಕರೆದಿದ್ದು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಬುಲಾವ್ ನೀಡಿದ್ದಾರೆ. ಆದರೆ, 80 ಶಾಸಕರ ಪೈಕಿ ನಮ್ಮ ಗುಂಪಿನಲ್ಲಿ 64 ಶಾಸಕರ ಬೆಂಬಲ ಇದೆ. ಹೀಗಾಗಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ ಆಗಲ್ಲ ಅಂತ ರೆಬೆಲ್ ಲೀಡರ್ ರುತಬ್ರತಾ ಹೇಳಿದ್ದಾರೆ