ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ನಟಿ ರುಕ್ಮಣಿ ವಸಂತ್ ಅವರು ಬಿಕಿನಿ ಧರಿಸಿರುವ ನಕಲಿ ವಿಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಇದರ ಬಗ್ಗೆ ನಟಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ಕೊಟ್ಟಿದ್ದು. ಈ ಪೋಟೋವನ್ನು ಹರಿಬಿಟ್ಟವರ ವಿರುದ್ದ ದೂರು ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕೆಟ್ಟ ಕೆಲಸಗಳಿಗೆ AI ಬಳಸಬೇಡಿ ಎಂಬ ಕಿವಿ ಮಾತನ್ನು ಹೇಳಿದ್ದಾರೆ.
ಕಾಂತಾರ ಸಿನಿಮಾದ ಕನಕಾವತಿ ರುಕ್ಮಿಣಿ ವಸಂತ್ ಸ್ಯಾಂಡಲ್ವುಡ್ ಮಾತ್ರವಲ್ಲದೆ ಬಹುಭಾಷ ನಟಿಯಾಗಿ ಮಿಂಚುತ್ತಿದ್ದಾರೆ. ಆದರೆ ಇತ್ತೀಚೆಗೆ ನಟಿಯ ಬಿಕಿನಿ ತೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದ ಸತ್ಯಾಸತ್ಯತೆ ಹರಿಯದ ಹಲವರು ಈ ವಿಡಿಯೋವನ್ನು ಶೇರ್ ಮಾಡಿದ್ದಲ್ಲದೆ, ನಟಿಯ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದರು.
ಆದರೆ ಮೊದಲನೇ ಸಿನಿಮಾದಿಂದ ಈವರೆಗೂ ಒಂದೇ ಒಂದು ಬಾರಿಯೂ ರುಕ್ಮಿಣಿ ವಸಂತ್ ಮಾದಕ ಉಡುಗೆಗಳನ್ನೂ ತೊಟ್ಟವರಲ್ಲ. ಹಾಗಾಗಿ ಸಹಜವಾಗಿಯೇ ವಿಡಿಯೋ ನೋಡಿದ್ದ ಅಭಿಮಾನಿಗಳಿಗೆ ಪಿತ್ತ ನೆತ್ತಿಗೇರಿತ್ತು. ಇದು ನಮ್ ನಟಿನಾ? ಅಂತ ಕೆಲವರು ಗರಂ ಆಗಿದ್ದರು. ಇದು ಎಐ ನಿರ್ಮಿತ ವಿಡಿಯೋ ಅಂತ ಕೆಲವರು ಹೇಳಿದ್ದರೂ ಸಮಾಧಾನ ಆಗಲಿಲ್ಲ ರುಕ್ಮಿಣಿ ಫ್ಯಾನ್ಸ್ಗೆ. ಆಗ ಸ್ವತಃ ರುಕ್ಮಿಣಿ ಅವರೇ ಅಖಾಡಕ್ಕೆ ಇಳಿಯಬೇಕಾಯಿತು.
ಕಾನೂನು ಕ್ರಮದ ಎಚ್ಚರಿಕೆ..!
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರುಕ್ಮಣಿ ವಸಂತ್ " ಈಗಾಗಲೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಎಐಯನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕೇ ಹೊರತು ಕೆಟ್ಟ ಕೆಲಸಗಳಿಗೆ ಅಲ್ಲ.ಕೇವಲ ನಟಿಯರಷ್ಟೇ ಅಲ್ಲ ಬೇರೆ ಹೆಣ್ಣು ಮಕ್ಕಳಿಗೂ ಸಹ ಇದರಿಂದ ಸಮಸ್ಯೆ ಆಗುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನೇಕ ನಟಿಯರಿಗೆ ಈ ರೀತಿಯ ಅನುಭವ ಆಗಿದೆ. ಅದರಲ್ಲೂ ಕನ್ನಡದ ಸ್ಟಾರ್ ನಟಿಯರೇ ಟಾರ್ಗೆಟ್ ಆಗುತ್ತಿದ್ದಾರೆ. ಈ ಹಿಂದೆಯೂ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋಗಳು ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ದೀಪಿಕಾ ಪಡುಕೋಣೆ ಕೂಡ ಈ ರಾಕ್ಷಸರಿಂದ ತೊಂದರೆ ಅನುಭವಿಸಬೇಕಾಯಿತು. ಆದರೂ, ಈ ಕಿಡಿಗೇಡಿಗಳ ಕಾಟ ಕಡಿಮೆಯಾಗುತ್ತಿಲ್ಲ.
