Search


ಟಾಕ್ಸಿಕ್ ಟ್ರೈಲರ್ ರಿಲೀಸ್: ಯಶ್‌ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಬಹಳ ದಿನಗಳಿಂದ ಸಿನಿಮಾ ಬಗ್ಗೆ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಟ್ರೈಲರ್ ಮೂಲಕ ಚಿತ್ರತಂಡ ಭರ್ಜರಿ ಟ್ರೀಟ್ ನೀಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಟ್ರೈಲರ್‌ನಲ್ಲಿ ಯಶ್‌ ಅವರನ್ನು ಸಂಪೂರ್ಣ ವಿಭಿನ್ನ ಅವತಾರದಲ್ಲಿ ನೋಡಬಹುದು. 

ರಗಡ್ ಲುಕ್‌, ಸ್ಟೈಲಿಶ್ ಬಾಡಿ ಲ್ಯಾಂಗ್ವೇಜ್‌, ರಕ್ತಸಿಕ್ತ ಆ್ಯಕ್ಷನ್ ಮತ್ತು ಡಾರ್ಕ್ ವಾತಾವರಣ ಟ್ರೈಲರ್‌ನ ಪ್ರಮುಖ ಆಕರ್ಷಣೆಯಾಗಿವೆ. KGF ಸಿನಿಮಾಗಳಲ್ಲಿ ಯಶ್‌ ಅವರನ್ನು ಮಾಸ್ ಹೀರೋ ಆಗಿ ನೋಡಿದ್ದ ಅಭಿಮಾನಿಗಳಿಗೆ ‘ಟಾಕ್ಸಿಕ್’ನಲ್ಲಿ ಮತ್ತೊಂದು ಹೊಸ ಯಶ್‌ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ. ಟ್ರೈಲರ್‌ನಲ್ಲಿನ ಆ್ಯಕ್ಷನ್ ದೃಶ್ಯಗಳು ಮಾತ್ರವಲ್ಲದೆ, ಪಾತ್ರದ ಭಾವನಾತ್ಮಕ ಮುಖವೂ ಕುತೂಹಲ ಮೂಡಿಸಿದೆ.

ಟಾಕ್ಸಿ ಕ್ ಕಥೆ ಗ್ಯಾಂಗ್‌ಸ್ಟರ್ ಲೋಕದ ಸುತ್ತ ಸಾಗುವ ಸೂಚನೆ ಟ್ರೈಲರ್‌ನಿಂದ ಸಿಗುತ್ತದೆ. ಅಧಿಕಾರ, ಸಂಘರ್ಷ, ಸಂಬಂಧಗಳು ಮತ್ತು ಹಿಂಸೆಯ ನಡುವೆ ಸಾಗುವ ಕಥೆಯಲ್ಲಿ ಯಶ್‌ ಅವರ ಪಾತ್ರ ಹೇಗೆ ರೂಪುಗೊಳ್ಳುತ್ತದೆ ಎಂಬುದು ಸಿನಿಮಾದಲ್ಲಿ ತಿಳಿಯಲಿದೆ. ಟ್ರೈಲರ್‌ನಲ್ಲಿ ಕಾಣಿಸುವ ಕೆಲವು ದೃಶ್ಯಗಳು ಸಿನಿಮಾದ ಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿವೆ. ವಿಶೇಷವಾಗಿ ಯಶ್‌ ಅವರ ಆ್ಯಕ್ಷನ್ ದೃಶ್ಯಗಳು ಮತ್ತು ಡೈಲಾಗ್ ಡೆಲಿವರಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಚಿತ್ರದಲ್ಲಿ ಯಶ್‌ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೈಲರ್‌ನಲ್ಲಿ ಈ ಪಾತ್ರಗಳ ಝಲಕ್ ಕೂಡ ಕಾಣಿಸಿಕೊಂಡಿದ್ದು, ಕಥೆಯಲ್ಲಿ ಇವರ ಪಾತ್ರಗಳೇನು ಎಂಬ ಕುತೂಹಲ ಮೂಡಿದೆ. ಟಾಕ್ಸಿಕ್ಗೆ ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್‌ದಾಸ್ ನಿರ್ದೇಶನ ನೀಡಿದ್ದಾರೆ. ಯಶ್‌ ಅವರ ಸ್ಟಾರ್‌ ಇಮೇಜ್‌ ಮತ್ತು ಗೀತು ಅವರ ವಿಭಿನ್ನ ಕಥೆ ಹೇಳುವ ಶೈಲಿ ಒಂದಾಗಿರುವುದು ಸಿನಿಮಾದ ಪ್ರಮುಖ ವಿಶೇಷತೆ.

ಟ್ರೈಲರ್‌ ನೋಡಿದರೆ ಇದು ಸಾಮಾನ್ಯ ಮಾಸ್ ಸಿನಿಮಾವಲ್ಲ ಎಂಬ ಭಾವನೆ ಮೂಡುತ್ತದೆ. ಡಾರ್ಕ್‌ ಟೋನ್‌, ವಿಭಿನ್ನ ದೃಶ್ಯಕಲ್ಪನೆ ಮತ್ತು ಆ್ಯಕ್ಷನ್‌ ಜೊತೆಗೆ ಭಾವನಾತ್ಮಕ ಅಂಶಗಳಿಗೂ ಚಿತ್ರದಲ್ಲಿ ಜಾಗವಿದೆ ಎಂಬುದು ಗೋಚರಿಸುತ್ತದೆ. ಇದೀಗ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಯಶ್‌ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆಯಾದ ಬಳಿಕ ‘ಟಾಕ್ಸಿಕ್’ ಪ್ರೇಕ್ಷಕರ ನಿರೀಕ್ಷೆಯನ್ನು ಎಷ್ಟರ ಮಟ್ಟಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

By Ravikumar - 08-08-2026


Ads in Post