ಹೈದರಾಬಾದ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಆರು ಬಾಲಕರು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಹೈದರಾಬಾದ್ ಸಮೀಪದ ಪೆದ್ದ ಕಂಜರ್ಲ ಗ್ರಾಮದಲ್ಲಿ ನಡೆದಿದೆ. ದತ್ತಿ ಸಂಸ್ಥೆಯೊಂದು ನಡೆಸುತ್ತಿರುವ ಹಾಸ್ಟೆಲ್ನಲ್ಲಿ ವಾಸವಾಗಿದ್ದ ಎಂಟು ಬಾಲಕರು ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದರು. ಈ ವೇಳೆ ಎಲ್ಲರೂ ಕೆರೆಗೆ ಬಿದ್ದಿದ್ದು, ಇಬ್ಬರು ಬಾಲಕರು ಈಜಿ ದಡ ಸೇರಿದ್ದಾರೆ. ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಬಾಲಕನಿಗೆ ಸಿಪಿಆರ್ ನೀಡಿ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಬಾಲಕನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಕೆರೆಯು ಜನಸಂಚಾರವಿಲ್ಲದ ಏಕಾಂತ ಪ್ರದೇಶದಲ್ಲಿದ್ದರಿಂದ ಬಾಲಕರನ್ನು ರಕ್ಷಿಸಲು ತಕ್ಷಣ ನೆರವಾಗುವ ಯಾವುದೇ ವಯಸ್ಕರು ಸ್ಥಳದಲ್ಲಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆರೆಯಲ್ಲಿದ್ದ ಕೆಸರು ಕೂಡ ಬಾಲಕರು ಮುಳುಗಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಬಾಲಕರ ಸಾವಿಗೆ ತೆಲಂಗಾಣ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದು, ಮೃತ ಬಾಲಕರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.