Search


ಟಿಎಂಸಿಗೆ ಕೈ ಕೊಡ್ತಾರಾ 23 ಸಂಸದರು: ದೀದಿಗೆ ಸಂಕಷ್ಟಗಳ ಮೇಲೆ ಸಂಕಷ್ಟ...!

ನವದೆಹಲಿ: ರಾಜಕಾರಣದ ಉತ್ತುಂಗದಲ್ಲಿದ್ದ ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಕೇವಲ 1 ತಿಂಗಳಲ್ಲಿ ಪಾತಾಳಕ್ಕೆ ಬಿದ್ದಿದ್ದಾರೆ. ಈಗಾಗಲೇ ಪಕ್ಷದ 59 ಶಾಸಕರು ಮಮತಾಗೆ ಕೈ ಕೊಟ್ಟು ಬಂಡಾಯವೆದ್ದಿದ್ದು, ಇದೀಗ ಪಕ್ಷದ 23 ಸಂಸದರು ಕೂಡ ಮಮತಾ ಬಿಟ್ಟು ವಿರೋಧಿ ಬಣಕ್ಕೆ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ನಡುವೆ ದೀದಿ ಕ್ರಿಕೆಟಿಗ ಯೂಸಫ್‌ ಪಠಾಣ್‌ ಲೋಕಸಭ ಕ್ಷೇತ್ರಕ್ಕೆ ರಾಜೀನಾಮೆ ನೀಡಲು ಸೂಚಿಸಿದ್ದು, ಅಲ್ಲಿಂದ ಗೆದ್ದು ಲೋಕಸಭೆ ಪ್ರವೇಶಿಸಲು ಯೋಚಿಸಿದ್ದಾರೆ ಎನ್ನಲಾಗಿದೆ.

ಟಿಎಂಸಿಯ 28 ಸಂಸದರು ಲೋಕಸಭೆಯಲ್ಲಿ (Lok Sabha) ಮತ್ತು 13 ಸಂಸದರು ರಾಜ್ಯಸಭೆಯಲ್ಲಿದ್ದಾರೆ. ಲೋಕಸಭೆಯ ವಿರೋಧ ಪಕ್ಷಗಳ ಪಾಳಯದಲ್ಲಿ ಟಿಎಂಸಿಯು 2ನೇ ಅತಿದೊಡ್ಡ ಪಕ್ಷವಾಗಿದೆ. ಒಂದು ವೇಳೆ ಸಂಸದರು ಕೂಡ ಪಕ್ಷಾಂತರ ಮಾಡಿದರೆ, ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಶಾಸಕರ ಬಂಡಾಯ ಎದುರಿಸುತ್ತಿರುವ ಮಮತಾ ಬ್ಯಾನರ್ಜಿ  ಅವರಿಗೆ ಪಕ್ಷ ಉಳಿಸಿಕೊಳ್ಳೋದೂ ಕಷ್ಟವಾಗಲಿದೆ.

ಇದನ್ನೂ ಓದಿ : ಭಾರತಕ್ಕೆ ಬಂಪರ್‌: ಅಂಡಮಾನ್‌ನಲ್ಲಿ ಗ್ಯಾಸ್‌ ನಿಕ್ಷೇಪ ಪತ್ತೆ..!

ಪಕ್ಷದ ಚಿಹ್ನೆ ಕೈ ಬಿಟ್ಟು ಹೋಗುವ ಆತಂಕ..!

ಬಂಗಾಳದ ಟಿಎಂಸಿ ಶಾಸಕಾಂಗ ಪಕ್ಷವು ಈಗಾಗಲೇ ಇಬ್ಭಾಗವಾಗಿದ್ದು, ರುತಬ್ರತಾ ಬ್ಯಾನರ್ಜಿ ನೇತೃತ್ವದ 60 ಬಂಡಾಯ ಶಾಸಕರ ಗುಂಪು ತಾವು ‘ನಿಜವಾದ ಟಿಎಂಸಿ’ ಎಂದು ಹೇಳಿಕೊಂಡಿತ್ತು. ಒಂದು ವೇಳೆ ಈ ಬಂಡಾಯ ಶಾಸಕರು ಚುನಾವಣಾ ಆಯೋಗದ ಮುಂದೆ ಪಕ್ಷದ ಚಿಹ್ನೆಗಾಗಿ ಬೇಡಿಕೆ ಇಟ್ಟರೆ, ಮಮತಾ ಕಟ್ಟಿ ಬೆಳೆಸಿದ ಪಕ್ಷದ ಸಂಪೂರ್ಣ ಹಿಡಿತ ಕೈ ತಪ್ಪಿ ಹೋಗುತ್ತದೆ.

ಮೂಲಗಳ ಪ್ರಕಾರ, ಶಾಸಕರ ಬಂಡಾಯದ ಬಳಿಕ ಟಿಎಂಸಿ ಸಂಸದರಲ್ಲೂ ಅಸಮಾಧಾನ ಸ್ಫೋಟಗೊಂಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರ ಬಗ್ಗೆ ಹಲವು ಸಂಸದರು ಅತೃಪ್ತರಾಗಿದ್ದಾರೆ. ನಾಯಕತ್ವ ಆಯ್ಕೆ ವಿಚಾರದಲ್ಲಿ ಹೆಚ್ಚುತ್ತಿರುವ ಭಿನ್ನವು ಈಗ ಪಕ್ಷ ಇಬ್ಬಾಗವಾಗುವ ಹಂತಕ್ಕೆ ತಲುಪುತ್ತಿದೆ. ಇನ್ನೂ ತೃಣಮೂಲ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತೀವ್ರಗೊಂಡಿರುವ ಹೊತ್ತಿನಲ್ಲೇ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಫಿರ್ಹಾದ್ ಹಕೀಮ್ ಕೋಲ್ಕತ್ತಾ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

By Ravikumar - 06-06-2026


Ads in Post