ದೇಶದಲ್ಲೆಡೆ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದ ಉಗ್ರ ಜಂತುಗಳ ಬಂಧನವಾಗುತ್ತಿದ್ದು, ಇದರ ನಡುವೆ ರಾಜ್ಯದಲ್ಲಿಯೂ ಇಬ್ಬರು ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ದೇಶದ ಭದ್ರತೆಗೆ ಧಕ್ಕೆ ತರಲು ಹಾಗೂ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಇಬ್ಬರು ಯುವಕರನ್ನು ತುಮಕೂರು (Tumakur) ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರು ನಿವಾಸಿ ಅಲ್ಲಾಬಕ್ಷು (24) ಮತ್ತು ದಾವಣಗೆರೆಯ ಬಿಡಿ ಲೇಔಟ್ ನಿವಾಸಿ ಜಮೀರ್ ಖಾನ್ (22) ಎಂದು ಗುರುತಿಸಲಾಗಿದೆ.
ಪಾಕ್ ಮೂಲದ ಉಗ್ರ ʻರಾಣʼನಿಂದ ಸಂಚು...!
ಪಾಕ್ ಮೂಲದ ಉಗ್ರ ರಾಣ ಎಂಬಾತ ಇನ್ಸ್ಟಾಗ್ರಾಮ್ ಮೂಲಕ ಯುವಕರನ್ನ ಸಂಪರ್ಕಿಸಿದ್ದ, ನಂತರ ಅವರೆಲ್ಲರನ್ನು ಸೇರಿಸಿಕೊಂಡು ವಾಟ್ಸಪ್ ಗ್ರೂಪ್ ರಚಿಸಿಕೊಂಡು, ಅದರಲ್ಲಿ ಧರ್ಮದ ಆಚರಣೆ ಮತ್ತು ಧರ್ಮಗುರುಗಳ ಪ್ರವಚನಗಳನ್ನ ಹಂಚಿಕೊಳ್ಳುತ್ತಿದ್ದ, ನಿಧಾನವಾಗಿ ಈ ಗ್ರೂಪ್ಗೆ ಉತ್ತರ ಭಾರತ ಮೂಲದ ಮುಸ್ಲಿಂ ಯುವಕರನ್ನ ಸೇರಿಸಿಕೊಂಡಿದ್ದ ರಾಣ, ತದನಂತರ ನಿಧಾನವಾಗಿ ‘ನಮ್ಮ ಸಮುದಾಯಕ್ಕೆ ಯಾವುದೇ ತೊಂದರೆಯಾದರೂ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು, ತಡೆಯಬೇಕು’ ಎಂದು ಇವರ ತಲೆಗೆ ವಿಷ ತುಂಬಿ ಬ್ರೈನ್ವಾಶ್ ಮಾಡಿದ್ದ.
ಜೊತೆಗೆ ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಮೌಲ್ವಿ ಹತ್ಯೆಗೆ ದೇಶದೊಳಗೆ ಭೀಕರ ಪ್ರತಿಕಾರ ತೀರಿಸಿಕೊಳ್ಳುವ ಕುರಿತು ಈ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಉಗ್ರ ರಾಣಾ ಚರ್ಚೆ ಆರಂಭಿಸಿದ್ದ ಎನ್ನಲಾಗಿದೆ. ದೇಶದ ಆಂತರಿಕ ಭದ್ರತೆಗೆ ತೀವ್ರ ಧಕ್ಕೆ ಉಂಟಾಗುವ ಮತ್ತು ಭಯೋತ್ಪಾದಕ ದಾಳಿ ನಡೆಯುವ ಗಂಭೀರ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯ ಪೊಲೀಸರನ್ನು ಅಲರ್ಟ್ ಮಾಡಿತ್ತು.
ಗುಪ್ತಚರ ಇಲಾಖೆ ಕೊಟ್ಟಿತ್ತು ಮಾಹಿತಿ...!
ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಹತ್ವದ ಸುಳಿವಿನ ಆಧಾರದ ಮೇಲೆ ಈ ಜಂಟಿ ಕಾರ್ಯಾಚರಣೆ ನಡೆದಿದೆ. ದಾವಣಗೆರೆ ಎಸ್ಪಿ ಡಾ. ಎಚ್.ಟಿ. ಶೇಖರ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತುಮಕೂರು ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೇರೆಡೆಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ, ಇವರು ಪಾಕಿಸ್ತಾನದ ಐಸಿಸ್ (ISIS) ಉಗ್ರ ಸಂಘಟನೆಗೆ ಫಂಡಿಂಗ್ ಮಾಡುತ್ತಿದ್ದ ಜಾಲದೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಅಷ್ಟೇ ಅಲ್ಲದೆ, ಭಾರತದ ವಿವಿಧೆಡೆ ಭಾರಿ ಪ್ರಮಾಣದ ಬಾಂಬ್ ಸ್ಫೋಟಗಳನ್ನು ನಡೆಸಲು ವ್ಯವಸ್ಥಿತ ಸಂಚು ಹೂಡುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊದಲಿಗೆ ತುಮಕೂರಿನಲ್ಲಿ ಅಲ್ಲಾಬಕ್ಷುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ದಾವಣಗೆರೆಯ ಜಮೀರ್ ಖಾನ್ ಹೆಸರನ್ನು ಬಾಯಿಬಿಟ್ಟಿದ್ದ. ಸದ್ಯ ಇಬ್ಬರನ್ನೂ ಬಂಧಿಸಿರುವ ತುಮಕೂರು ನಗರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ರಾಜ್ಯದಲ್ಲಿ ಇವರ ಹಿಂದೆ ಇರುವ ದೊಡ್ಡ ಸ್ಲೀಪರ್ ಸೆಲ್ ನೆಟ್ವರ್ಕ್ ಭೇದಿಸಲು ಮುಂದಾಗಿದ್ದಾರೆ.