ಬೆಂಗಳೂರು: RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ ಇಬ್ಬರು ಶಿಕ್ಷಕರನ್ನ ಅಮಾನತು ಮಾಡಿರುವ ಕ್ರಮಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದರಿಂದ ಅವರು ಮಾಡಿರುವ ದೊಡ್ಡ ತಪ್ಪೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಶಿಕ್ಷಕರು ಪಥಸಂಚಲನದಲ್ಲಿ ಭಾಗವಹಿಸಿದ್ದರಿಂದ ಕರ್ನಾಟಕದಲ್ಲಿ ಯಾವುದೇ ಹಾನಿ, ಹಿಂಸಾಚಾರ ಅಥವಾ ಅಡಚಣೆ ಉಂಟಾಗಿದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಯಾದಗಿರಿಯ, ಸುರಪುರ ತಾಲೂಕಿನ ಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಣ್ಣಾ ಸಾಹೇಬ್ ದೇಶಮುಖ್ ಹಾಗೂ ಹುಣಸಗಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಹಾಯಕ ಶಿಕ್ಷಕ ಗುರುರಾಜ್ ಜೋಶಿ 2025ರ ಅಕ್ಟೋಬರ್ 10 ಮತ್ತು 12ರಂದು ನೆರೆಯ ವಿಜಯಪುರ ಜಿಲ್ಲೆಯ ತಾಳಿಕೋಟೆ ಹಾಗೂ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಈ ಕುರಿತು ಕಳೆದ ವರ್ಷ ಯಾದಗಿರಿ ಜಿಲ್ಲಾ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷ ಜುಮ್ಮಣ್ಣ ಗುಡಿಮನಿ, ಈ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ, ಅವರು ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೆಂಬ ಆರೋಪದ ಕುರಿತು ಸರ್ಕಾರದ ಗಮನಕ್ಕೂ ತಂದಿದ್ದರು. ಈ ಕುರಿತು ತನಿಖೆ ನಡೆಸಿದ್ದ ಶಾಲಾ ಶಿಕ್ಷಣ ಇಲಾಖೆ ʻಆಗಸ್ಟ್ 20ರಂದು ಯಾದಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಅವರು ಅಮಾನತು ಆದೇಶ ಹೊರಡಿಸಿದ್ದರು.
ಈ ಕ್ರಮಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ʻಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದರಿಂದ ಆಗಿರುವ ತಪ್ಪೇನು, ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ರಾಜ್ಯದಲ್ಲಿ ಯಾವುದಾದರು ಹಾನಿ, ಹಿಂಸಾಚಾರ ಅಥವಾ ಅಡಚಣೆ ಉಂಟಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.