ಬೆಂಗಳೂರು: ಎಂಟು ತಿಂಗಳ ಹಿಂದೆ ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರನ್ನು ಸಿಐಡಿ ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಇಬ್ಬರೂ ವಿದ್ಯಾರ್ಥಿನಿಯರು ಕಳೆದ ಜನವರಿ 31ರಂದು ಕಾಲೇಜಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳೀಯ ಪೊಲೀಸರು ಹಲವು ಕಡೆಗಳಲ್ಲಿ ಶೋಧ ನಡೆಸಿದರೂ ಆರಂಭದಲ್ಲಿ ಯಾವುದೇ ಮಹತ್ವದ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ, ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.
ಸ್ಥಳೀಯ ಪೊಲೀಸರ ತನಿಖೆಯಲ್ಲಿ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಮಾಹಿತಿ ಲಭ್ಯವಾಗಿತ್ತು. ಅಲ್ಲಿ ಮಗುವೊಂದರೊಂದಿಗೆ ಆಟವಾಡುತ್ತಿದ್ದಾಗ ಮಗುವಿನ ತಾಯಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಇದೇ ವೇಳೆ ಬೆಟ್ಟದ ಆವರಣದಲ್ಲಿ ಕನಕಪುರ ಮೂಲದ ಯುವಕನೊಬ್ಬನ ಪರಿಚಯ ಇಬ್ಬರು ವಿದ್ಯಾರ್ಥಿನಿಯರಿಗೆ ಆಗಿತ್ತು. ಕುಟುಂಬದಲ್ಲಿನ ಒತ್ತಡದಿಂದ ಹೆದರಿದ್ದ ತನಿಷ್ಕಾ, ತಾವು ಅಕ್ಕ-ತಂಗಿಯರು ಹಾಗೂ ತಂದೆ-ತಾಯಿ ಇಲ್ಲದ ಅನಾಥರು ಎಂದು ಆ ಯುವಕನಿಗೆ ಸುಳ್ಳು ಹೇಳಿದ್ದಾಳೆ ಎನ್ನಲಾಗಿದೆ.
ಯುವತಿಯರ ಮಾತನ್ನು ನಂಬಿದ ಯುವಕ ಇಬ್ಬರನ್ನೂ ತನ್ನೊಂದಿಗೆ ಕರೆದೊಯ್ದಿದ್ದಾನೆ. ಬಳಿಕ ತನಿಷ್ಕಾಳನ್ನು ಮದುವೆಯಾಗಿದ್ದು, ತೇಜಸ್ವಿನಿಯನ್ನು ತನ್ನ ತಂಗಿಯಂತೆ ಮನೆಯಲ್ಲೇ ಇರಿಸಿಕೊಂಡಿದ್ದ ಎನ್ನಲಾಗಿದೆ. ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್ ಪಡೆಯಲು ತನ್ನ ಮೂಲ ಆಧಾರ್ ಕಾರ್ಡ್ ಬಳಸಿದ್ದಾಳೆ. ಈ ಆಧಾರ್ ಸಂಖ್ಯೆಯ ಮೇಲೆ ಸಿಐಡಿ ಅಧಿಕಾರಿಗಳು ನಿಗಾ ಇರಿಸಿದ್ದರಿಂದ ಟೆಲಿಕಾಂ ಸಂಸ್ಥೆಯಿಂದ ಮಾಹಿತಿ ಸಿಕ್ಕಿದೆ. ಆಧಾರ್ ಮಾಹಿತಿ ಹಾಗೂ ಮೊಬೈಲ್ ನೆಟ್ವರ್ಕ್ ಸ್ಥಳದ ಆಧಾರದ ಮೇಲೆ ತನಿಖೆ ನಡೆಸಿದ ಸಿಐಡಿ ತಂಡ ಇಬ್ಬರನ್ನೂ ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ತನಿಷ್ಕಾ ಗರ್ಭಿಣಿಯಾಗಿರುವುದಾಗಿ ತಿಳಿದುಬಂದಿದ್ದು, ಇಬ್ಬರನ್ನೂ ಸಿಐಡಿ ಪೊಲೀಸರು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.