ಚೆನ್ನೈ: ನಟಿ ತ್ರಿಶಾ ಕುರಿತು ಡಿಎಂಕೆ ನಾಯಕ ಹಾಗೂ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಉದಯನಿಧಿ ಅವರು ತ್ರಿಶಾ ಅವರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಏನಿದು ವಿವಾದ..!
ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ ಪ್ರತಿಭಟನಾ ಕಾರ್ಯಕ್ರಮವೊಂದರಲ್ಲಿ ಉದಯನಿಧಿ ಸ್ಟಾಲಿನ್ ಮಾತನಾಡುತ್ತಿದ್ದ ವೇಳೆ, ಸಭೆಯಲ್ಲಿದ್ದ ಕೆಲವರು ‘ತ್ರಿಶಾ, ತ್ರಿಶಾ’ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉದಯನಿಧಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಖುಷ್ಬೂ ಸುಂದರ್, ಉದಯನಿಧಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೇಳಿಕೆ ‘ಅಸಭ್ಯ, ಕೀಳುಮಟ್ಟದ ಮತ್ತು ಅವಹೇಳನಕಾರಿ’ ಎಂದು ಅವರು ಟೀಕಿಸಿದ್ದಾರೆ.
ಮಹಿಳೆಯರನ್ನು ಸಾರ್ವಜನಿಕವಾಗಿ ಅವಮಾನಿಸುವ ರೀತಿಯ ಹೇಳಿಕೆಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಖುಷ್ಬೂ ಹೇಳಿದ್ದಾರೆ. ರಾಜಕೀಯ ವೇದಿಕೆಯಲ್ಲಿ ಮಾತನಾಡುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದಿರುವ ಅವರು, ತ್ರಿಶಾ ಅವರನ್ನು ಗುರಿಯಾಗಿಸಿಕೊಂಡ ಹೇಳಿಕೆಗೆ ಉದಯನಿಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಕುರಿತು ರಾಜಕೀಯ ಹಾಗೂ ಚಿತ್ರರಂಗದ ವಲಯಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ
ಖುಷ್ಬೂ ಆಗ್ರಹವೇನು?
ತ್ರಿಶಾ ಕುರಿತು ನೀಡಿರುವ ಹೇಳಿಕೆಗೆ ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ರಾಜಕೀಯ ವೇದಿಕೆಗಳಲ್ಲಿ ನೀಡಬಾರದು ಎಂದು ಖುಷ್ಬೂ ಸುಂದರ್ ಆಗ್ರಹಿಸಿದ್ದಾರೆ. ಜೊತೆಗೆ ಉದಯನಿಧಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು. ಉದಯನಿಧಿ ಬಂಧನವಾಗುವ ಸಾಧ್ಯತೆ ಇದೆ ಎಂದು ಕೂದ ಚರ್ಚೆಯಾಗುತ್ತಿದೆ.