Search


ಮಾಧ್ಯಮ ಕ್ಷೇತ್ರದಲ್ಲಿ ನೈತಿಕತೆ ಉಳಿಸುವುದು ಅತ್ಯಗತ್ಯ; ಜಿಎಂಸಿ ಉದ್ಘಾಟನಾ ಸಮಾರಂಭದಲ್ಲಿ ಕೆ.ವಿ. ಪ್ರಭಾಕರ್ ಕಿವಿಮಾತು

ಗ್ಲೋಬಲ್ ಮೀಡಿಯಾ ಕೌನ್ಸಿಲ್ (GMC) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕರ್ನಾಟಕದ ಹಿರಿಯ ಹಾಗೂ ಅನುಭವಿ ಪತ್ರಕರ್ತರು ಸೇರಿ ಆರಂಭಿಸುತ್ತಿರುವ ಈ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಮನಿಸಿದಾಗ, ‘ಕರ್ನಾಟಕ ಗ್ಲೋಬಲ್ ಮೀಡಿಯಾ ಕೌನ್ಸಿಲ್’ (KGMC) ಎಂಬ ಹೆಸರು ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು ಎಂಬ ಅಭಿಪ್ರಾಯ ತಮ್ಮಲ್ಲಿ ಮೂಡಿತ್ತು. ಕರ್ನಾಟಕದ ವಿದ್ಯಮಾನಗಳು ಮತ್ತು ವರದಿಗಾರಿಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

GMCಯ ಧ್ಯೇಯವಾಕ್ಯವಾಗಿರುವ ‘ಮಾಧ್ಯಮಗಳ ಮೂಲಕ ಮನಸ್ಸುಗಳನ್ನು ಜೋಡಿಸುವುದು’ ಎಂಬುದು ಸಂಸ್ಥೆಯ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ಸ್ಥಳೀಯ ವಿದ್ಯಮಾನಗಳನ್ನು ಜಾಗತಿಕ ವೇದಿಕೆಯೊಂದಿಗೆ ಬೆಸೆಯುವ ಸೇತುವೆಯಾಗಿ GMC ಕಾರ್ಯನಿರ್ವಹಿಸಲಿದೆ. ಪ್ರಾದೇಶಿಕ ಬೇರುಗಳನ್ನು ಬಲವಾಗಿ ಉಳಿಸಿಕೊಂಡು, ಜಾಗತಿಕ ಮಟ್ಟದ ವೃತ್ತಿಪರ ಅನುಭವವನ್ನು ಸಂಯೋಜಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡುವ ಉದ್ದೇಶವನ್ನು ಕೌನ್ಸಿಲ್ ಹೊಂದಿದೆ ಎಂದು ಅವರು ತಿಳಿಸಿದರು.

GMCಯ ಉದ್ದೇಶಗಳಲ್ಲಿ ‘Ethical P porogressive Media Community’ ನಿರ್ಮಾಣವೂ ಸೇರಿರುವುದನ್ನು ಉಲ್ಲೇಖಿಸಿದ ಅವರು, ಮಾಧ್ಯಮ ಕ್ಷೇತ್ರದಲ್ಲಿ ನೈತಿಕತೆಯ ಮಹತ್ವವನ್ನು ಒತ್ತಿಹೇಳಿದರು. ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಅನೈತಿಕ ಅಭ್ಯಾಸಗಳು ಹೆಚ್ಚಾಗುತ್ತಿರುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ GMC ಮೇಲೆ ಹೆಚ್ಚಿನ ನೈತಿಕ ಜವಾಬ್ದಾರಿ ಇದೆ. ಸಂಸ್ಥೆಯಲ್ಲಿರುವ ಹಿರಿಯ ಪತ್ರಕರ್ತರನ್ನು ತಾವು ಹತ್ತಿರದಿಂದ ನೋಡಿರುವುದರಿಂದ, GMC ನೈತಿಕ ಮಾರ್ಗದಲ್ಲಿ ಮುನ್ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಮಾಧ್ಯಮಗಳು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ತಲುಪಿಸುತ್ತಿವೆ. ಆದರೆ ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಹರಡುತ್ತಿರುವ ಸುಳ್ಳು ಮಾಹಿತಿ, ನಕಲಿ ಸುದ್ದಿಗಳು ಹಾಗೂ ಗೊಂದಲಕಾರಿ ವರದಿಗಳು ಸಮಾಜದ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಸವಾಲುಗಳ ನಡುವೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮದ ಘನತೆ, ವಿಶ್ವಾಸಾರ್ಹತೆ ಮತ್ತು ಜವಾಬ್ದಾರಿಯನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಇಂದಿನ ಅಗತ್ಯ ‘ನೈತಿಕ ಪತ್ರಿಕೋದ್ಯಮ’ವಾಗಿದ್ದು, ಅದು ಕೇವಲ ಸುದ್ದಿಯನ್ನು ವೇಗವಾಗಿ ತಲುಪಿಸುವುದಲ್ಲ; ಸತ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ಎತ್ತಿಹಿಡಿಯುವುದಾಗಿದೆ. ಸುದ್ದಿಯ ವೇಗಕ್ಕಿಂತ ಅದರ ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆ ಮುಖ್ಯ. ಮಾಧ್ಯಮಗಳು ಸಮಾಜದ ಧ್ವನಿಯಾಗಿ, ಬದಲಾವಣೆಯ ಹರಿಕಾರರಾಗಿ ಕಾರ್ಯನಿರ್ವಹಿಸಬೇಕು. ನಕಲಿ ಸುದ್ದಿಗಳ ವಿರುದ್ಧ ಸಕ್ರಿಯವಾಗಿ ಹೋರಾಡಿ, ಇರುವುದನ್ನು ಇರುವ ಹಾಗೆ ತೋರಿಸುವುದು GMCಯ ಪ್ರಮುಖ ಆದ್ಯತೆಯಾಗಬೇಕು ಎಂದು ಪ್ರಭಾಕರ್ ಹೇಳಿದರು.

ಜಗತ್ತಿನಾದ್ಯಂತ ಇರುವ ಮಾಧ್ಯಮ ವೃತ್ತಿಪರರು, ತಂತ್ರಜ್ಞಾನ ಸಂಶೋಧಕರು, ಡಿಜಿಟಲ್ ಸೃಷ್ಟಿಕರ್ತರು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ GMCಯ ಪ್ರಯತ್ನ ಶ್ಲಾಘನೀಯವಾಗಿದೆ. ಅಂತರರಾಷ್ಟ್ರೀಯ ಸಮಾವೇಶಗಳು ಮತ್ತು ತರಬೇತಿಗಳ ಮೂಲಕ ಯುವ ಪತ್ರಕರ್ತರನ್ನು ಸಶಕ್ತಗೊಳಿಸುವುದು ಹಾಗೂ ಹೊಸ ತಂತ್ರಜ್ಞಾನಗಳನ್ನು ಸಮಾಜದ ಹಿತಕ್ಕಾಗಿ ಬಳಸುವುದು ಮಹತ್ವದ ಹೆಜ್ಜೆಯಾಗಿದೆ. ಮಾಧ್ಯಮ ರಂಗದಲ್ಲಿ ಸತ್ಯ, ನ್ಯಾಯ ಮತ್ತು ನೈತಿಕತೆಯನ್ನು ಎತ್ತಿಹಿಡಿಯುವ GMCಯ ಕಾರ್ಯ ಯಶಸ್ವಿಯಾಗಲಿ, ಸ್ಥಳೀಯ ಧ್ವನಿಗಳಿಗೆ ಜಾಗತಿಕ ವೇದಿಕೆ ದೊರೆಯಲಿ ಮತ್ತು ಮನಸ್ಸುಗಳನ್ನು ಜೋಡಿಸುವ ಈ ಕೌನ್ಸಿಲ್ ಮಾಧ್ಯಮ ಲೋಕಕ್ಕೆ ದಾರಿದೀಪವಾಗಲಿ ಎಂದು ಅವರು ಹಾರೈಸಿದರು.

By Ravikumar - 25-09-2026


Ads in Post