ಟೆಹ್ರಾನ್: ಇರಾನ್ ಜೊತೆಗೆ ಕದನ ವಿರಾಮ ಕುರಿತು ನಡೆಯುತ್ತಿರುವ ಮಾತುಕತೆ ಅಂತಿಮ ಹಂತದಲ್ಲಿ ಇರುವಾಗಲೇ ಅಮೆರಿಕ ಪಡೆಗಳು ಭೀಕರ ದಾಳಿ ನಡೆಸಿವೆ. ಇರಾನ್ನ ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಗಣಿಗಳನ್ನು ನಿಯೋಜಿಸುವ ಬೋಟ್ಗಳನ್ನು ಗುರಿಯಾಗಿಸಿ ಅಮೆರಿಕದ ಪಡೆಗಳು ದಾಳಿ ನಡೆಸಿವೆ. ಅಷ್ಟೇ ಅಲ್ಲ ಬಂದರ್ ಅಬ್ಬಾಸ್ ದ್ವೀಪದಲ್ಲೂ ಸ್ಫೋಟಗಳು ಸಂಭವಿಸಿವೆ.
ಕಳೆದ ಕೆಲ ದಿನಗಳಿಂದ ಅಮೇರಿಕಾ ಮತ್ತು ಇರಾನ್ ನಡುವಿನ ದಾಳಿ-ಪ್ರತಿದಾಳಿಗಳು ನಿಂತಿದ್ದವು, ಆದರೆ ಇಂದು (ಮಂಗಳವಾರ) ಮುಂಜಾನೆ ದಕ್ಷಿಣ ಇರಾನ್ನಲ್ಲಿರುವ ಇರಾನಿನ ಮಿಲಿಟರಿ ನೆಲೆಗಳು ಹಾಗೂ ಮೈನ್ಸ್ ನಿಯೋಜಿಸುತ್ತಿದ್ದ ಬೋಟ್ಗಳ ಮೇಲೆ ಅಮೆರಿಕ ಸೇನೆ ಬೃಹತ್ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ಅಮೆರಿಕದ ಪಡೆಗಳು, ಯುದ್ಧನೌಕೆಗಳನ್ನು ರಕ್ಷಿಸಿಕೊಳ್ಳಲು ʻಆತ್ಮ ರಕ್ಷಣೆʼಯ ಭಾಗವಾಗಿ ನಡೆಸಿದ ದಾಳಿ ಇದಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಸಮರ್ಥಿಸಿಕೊಂಡಿದೆ. ಇರಾನ್ನ ಪಡೆಗಳಿಂದ ಉಂಟಾಗುವ ಸಂಭವನೀಯ ಬೆದರಿಕೆಗಳಿಂದ ನಮ್ಮ ಸೈನಿಕರನ್ನು ರಕ್ಷಿಸಲು ಅಮೆರಿಕದ ಪಡೆಗಳು ದಕ್ಷಿಣ ಇರಾನ್ನಲ್ಲಿ ಆತ್ಮರಕ್ಷಣಾ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ರೆವಲ್ಯೂಷನರಿ ಕಾರ್ಪ್ಸ್ಗೆ ಸೇರಿದ್ದ ಬೋಟ್ಗಳು ಜಲಬಾಂಬ್ ಇಡುತ್ತಿರುವುದನ್ನು ಗಮನಿಸಿತ್ತು. ಆ ನಂತರ ಅಮೆರಿಕ ಪಡೆ ತನ್ನ ಕಾರ್ಯಾಚರಣೆ ಶುರು ಮಾಡಿತು. ಈ ದಾಳಿಯಲ್ಲಿ ಮೈನ್ಸ್ ನಿಯೋಜಿಸುತ್ತಿದ್ದ 2 ದೋಣಿಗಳನ್ನ ನಾಶಪಡಿಸಲಾಯಿತು ಎಂದು ಯುಎಸ್ ಸೇನೆ ಹೇಳಿಕೊಂಡಿದೆ. ಅಷ್ಟೇ ಅಲ್ಲದೇ ಅಮೆರಿಕದ ಫೈಟರ್ ಜೆಟ್ಗಳನ್ನ ಗುರಿಯಾಗಿಸಲು ಪ್ರಯತ್ನಿಸಿದ್ದ ಬಂದರ್ ಅಬ್ಬಾಸ್ನಲ್ಲಿರುವ ಕ್ಷಿಪಣಿ ಉಡಾವಣಾ ತಾಣಗಳ ಮೇಲೂ ಅಮೆರಿಕ ವಾಯುದಾಳಿ ನಡೆಸಿದೆ.
ಈ ದಾಳಿಯನ್ನ ಅಮೆರಿಕಾ ಸಮರ್ಥಿಸಿಕೊಂಡಿದ್ದು, ನಾವು ಯಾವುದೇ ಕದನ ವಿರಾಮದ ಉಲ್ಲಂಘನೆ ಮಾಡಿಲ್ಲ ಎಂದು ಅಮೆರಿಕಾದ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ಅಮೆರಿಕಾದ ಈ ದಾಳಿಗೆ ಇರಾನ್ ಯಾವ ರೀತಿ ಪ್ರತಿಕ್ರಿಯೆ ನೋಡುತ್ತದೆ ಎಂಬುದನ್ನ ಕಾದು ನೋಡಬೇಕಿದೆ.