Search


ಮೋದಿ ಪಿಎಂ ಆಗಿರುವ ತನಕ ಭಾರತದ ರಕ್ಷಣೆಗೆ ನಾವು ಸಿದ್ದ ಪ್ಯಾರಿಸ್‌ನಲ್ಲಿ ಟ್ರಂಪ್‌ ಭರವಸೆ

ಪ್ಯಾರಿಸ್‌: ಭಾರತ ಮತ್ತು ಅಮೇರಿಕಾದ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿರುವ ನಡುವೆ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್‌ ಫ್ರಾನ್ಸ್‌ನಲ್ಲಿ ಮಾತುಕಥೆ ನಡೆಸಿದ್ದು, ಈ ವೇಳೆ ಟ್ರಂಪ್‌ ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದ್ದಾರೆ. ಈ ವೇಳೆ ಮೋದಿ ಭಾರತದ ಪ್ರಧಾನಿಯಾಗಿರುವವರೆಗೆ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಿದರೆ, ಭಾರತದ ನೆರವಿಗೆ ನಾವು ಧಾವಿಸುತ್ತೇವೆ ಎಂಬ ಆಶ್ವಾಸನೆಯನ್ನ ಕೊಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ಘೋಷಣೆ ಮಾಡಿದ್ದಾರೆ. ಮೀಟಿಂಗ್‌ ನಂತರ  ಪ್ರಧಾನಿ ನರೇಂದ್ರ ಮೋದಿ (PM Modi in France) ಅವರೊಂದಿಗೆ ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, “ಭಾರತದ ಮೇಲೆ ದಾಳಿಯಾದರೆ, ನಾವು ಅವರಿಗೆ ಸಹಾಯ ಮಾಡಲು ಖಂಡಿತಾ ಅಲ್ಲಿ ಇರುತ್ತೇವೆ. ಯಾರಾದರೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರೆ, ನಾವು ಮೋದಿಯವರ ಬೆಂಬಲಕ್ಕೆ ನಿಲ್ಲಲಿದ್ದೇವೆ. ಮೋದಿಯವರು ನಾಯಕರಾಗಿರುವವರೆಗೂ ಭಾರತಕ್ಕೆ ಅಮೆರಿಕದ ಸಂಪೂರ್ಣ ರಕ್ಷಣಾ ಬೆಂಬಲ ಇರಲಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಟ್ರಂಪ್‌ “ನಾನು ಅಧ್ಯಕ್ಷನಾಗಿರುವವರೆಗೂ ಭಾರತಕ್ಕೆ ವೈಟ್ ಹೌಸ್‌ನಲ್ಲಿ ಒಬ್ಬ ಅತ್ಯುತ್ತಮ ಸ್ನೇಹಿತನಿದ್ದಾನೆ ಎಂದೇ ಅರ್ಥ. ನಾವು ಫ್ರಾನ್ಸ್‌ನಲ್ಲಿ ಅತ್ಯುತ್ತಮ ಸಭೆಗಳನ್ನು ನಡೆಸಿದ್ದೇವೆ. ಪ್ರಸ್ತುತ ಭಾರತ ಮತ್ತು ಅಮೆರಿಕ ನಡುವೆ ದೊಡ್ಡ ಮಟ್ಟದ ವ್ಯಾಪಾರ ಒಪ್ಪಂದಗಳು ನಡೆಯುತ್ತಿವೆ. ಭಾರತವು ಅಮೆರಿಕದಲ್ಲಿ ಭಾರಿ ಹೂಡಿಕೆ ಮಾಡುತ್ತಿದ್ದು, ಫ್ಯಾಕ್ಟರಿಗಳನ್ನು ನಿರ್ಮಿಸುತ್ತಿದೆ. ಮೋದಿಯವರು ದೀರ್ಘಕಾಲದಿಂದ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ” ಎಂದು ಟ್ರಂಪ್ ಶ್ಲಾಘಿಸಿದ್ದಾರೆ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಲ್ಲಿ ಭಾರತ ಯಾವುದೇ ಪಾತ್ರ ವಹಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಖಂಡಿತವಾಗಿಯೂ ಹೌದು. ಭಾರತವು ಜಗತ್ತಿನ ಪ್ರತಿಯೊಂದು ವಿಷಯದಲ್ಲೂ ದೊಡ್ಡ ಪಾತ್ರ ವಹಿಸುತ್ತದೆ. ಅದರಲ್ಲೂ ನರೇಂದ್ರ ಮೋದಿಯವರು ನಾಯಕರಾಗಿರುವ ತನಕ ಜಾಗತಿಕ ರಾಜಕಾರಣದಲ್ಲಿ ಭಾರತದ ಪಾತ್ರ ಅತ್ಯಂತ ದೊಡ್ಡದಾಗಿರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

By Ravikumar - 18-06-2026


Ads in Post