ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು. ಕೂದಲೆಳೆ ಅಂತರದಲ್ಲಿ ಶತಕ ವಂಚಿತರಾದ ವೈಭವ್ ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕವನ್ನು ತಪ್ಪಿಸಿಕೊಂಡರು. ಆದರೂ ಕೂಡ ಈ ಪಂದ್ಯದಲ್ಲಿ ವೈಭವ್ ಅನೇಕ ದಾಖಲೆಗಳನ್ನ ಸೃಷ್ಟಿಸಿದ್ದು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.
ಒಂದು ಐಪಿಎಲ್‌ನಲ್ಲಿ ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಇದುವರೆಗೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿತ್ತು. 2012 ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಬರೋಬ್ಬರಿ 59 ಸಿಕ್ಸರ್‌ಗಳನ್ನು ಬಾರಿಸಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಆದರೆ 2026 ರ ಐಪಿಎಲ್‌ನಲ್ಲಿ ವೈಭವ್ 60 ಕ್ಕೂ ಅಧಿಕ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಒಂದು ಆವೃತ್ತಿಯಲ್ಲಿ ಅಧಿಕ ಸಿಕ್ಸರ್ ಬಾರಿಸಿದ ಆಟಗಾರನೆಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಕೂದಲೆಳೆ ಅಂತರದಲ್ಲಿ ತಪ್ಪಿತು ಮತ್ತೊಂದು ದಾಖಲೆ..!
2013 ರ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು. ವೈಭವ್ ಕೇವಲ 29 ಎಸೆತಗಳಲ್ಲಿ ಈ ದಾಖಲೆ ಮುರಿಯುವುದರಲ್ಲಿದ್ದರು. ಆದರೆ ಅದು ಆಗಲಿಲ್ಲ. ಆದಾಗ್ಯೂ ಶತಕದ ವಿಚಾರದಲ್ಲಿ ವೈಭವ್, ಗೇಲ್ ಅವರ ದಾಖಲೆ ಮುರಿಯಲು ಸಾಧ್ಯವಾಗದಿದ್ದರೂ, ಸಿಕ್ಸರ್ಗಳ ವಿಚಾರದಲ್ಲಿ ಗೇಲ್ ಅವರ ದಾಖಲೆ ಮುರಿದರು.
ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದ ವೈಭವ್ ಸೂರ್ಯವಂಶಿ 334.48 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 12 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಹೊಡೆದ ವೈಭವ್ ಕೇವಲ 3 ರನ್‌ಗಳಿಂದ ದಾಖಲೆಯ ಶತಕದಿಂದ ವಂಚಿತರಾದರೂ.