ಚೆನ್ನೈ: ಸಿಎಂ ಜೋಸೆಫ್ ವಿಜಯ್ (Vijay) ತಮ್ಮ ಚುನಾವಣಾ ಪ್ರಣಾಳಿಕೆಯ ಮತ್ತೊಂದು ಐತಿಹಾಸಿಕ ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಇನ್ಮುಂದೆ ತಮಿಳುನಾಡಿನ(Tamil Nadu) ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿಯೊಂದು ಶಿಶುಗಳಿಗೂ 1ಗ್ರಾಂ ತೂಕದ ಚಿನ್ನದ ಉಂಗುರ ನೀಡುವುದಾಗಿ ಆದೇಶ ಮಾಡಿದ್ದಾರೆ. ʻನೀಡುವ ತೈಮಾಮನ್ ತಂಗ ಮೋತಿರಾಂ ತಿಟ್ಟಂ ʼಎಂಬ ಹೆಸರಿನಲ್ಲಿ ಈ ಯೋಜನೆಯನ್ನ ಆರಂಭಿಸಿದ್ದಾರೆ.
ತಮ್ಮ ಜನ್ಮದಿನದಿಂದೇ ವಿಜಯ್ ಈ ಯೋಜನೆಯನ್ನ ಘೋಷಿಸಿದ್ದು, ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಎಲ್ಲಾ ಮಕ್ಕಳಿಗೂ ಈ ಯೋಜನೆ ಅನ್ವಯವಾಗಲಿದೆ. ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ಪ್ರತಿ ಮಗುವಿಗೂ ಸೋದರ ಮಾವ ಆಗ್ತಿದ್ದಾರೆ ವಿಜಯ್..!
ತಮಿಳುನಾಡಿನಲ್ಲಿ ಮಗು ಜನಿಸಿದಾಗ ಮನೆಗೆ ಬರಮಾಡಿಕೊಳ್ಳಲು ಸೋದರ ಮಾವನ ಕಡೆಯಿಂದ ಚಿನ್ನದ ಉಡುಗೊರೆ ನೀಡುವ (ತೈಮಾಮನ್ ಸೀರ್) ಪದ್ಧತಿ ಇದೆ. ಈಗ ಸರ್ಕಾರವೇ ಸಾಂಕೇತಿಕವಾಗಿ ಆ ಸೋದರ ಮಾವನ ಜವಾಬ್ದಾರಿಯನ್ನು ಹೊತ್ತು, ಪ್ರತಿ ಮಗುವಿಗೆ ಪ್ರೀತಿ ಈ ಚಿನ್ನದ ಉಂಗುರವನ್ನು ನೀಡಲು ಮುಂದಾಗಿದೆ. ಚಿನ್ನದ ಉಂಗುರದ ಆಕರ್ಷಣೆಯಿಂದಾಗಿ ಗ್ರಾಮೀಣ ಹಾಗೂ ಬಡ ಕುಟುಂಬಗಳು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾಲ ಮಾಡುವುದು ತಪ್ಪುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗಳನ್ನು ಉತ್ತೇಜಿಸುವುದು ಮತ್ತು ನವಜಾತ ಶಿಶು ಹಾಗೂ ತಾಯಂದಿರನ್ನು ಗೌರವಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಗಂಡು ಮಗು ಅಥವಾ ಹೆಣ್ಣು ಮಗು ಎಂಬ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಈ ಉಂಗುರ ಸಿಗಲಿದೆ. ಕುಟುಂಬದ ಎಷ್ಟನೇ ಮಗುವಾಗಿದ್ದರೂ (ಮೊದಲ, ಎರಡನೇ ಅಥವಾ ಮೂರನೇ ಮಗು) ಈ ಯೋಜನೆಯ ಲಾಭ ಪಡೆಯಬಹುದು. ಫಲಾನುಭವಿಗಳು ತಮಿಳುನಾಡಿನ ನಿವಾಸಿಗಳಾಗಿರಬೇಕು ಮತ್ತು ಅದಕ್ಕಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ಒದಗಿಸಬೇಕಾಗುತ್ತದೆ.