ಮುಂಬೈ: ಕಣ ಕಣದಲ್ಲೂ ಕೇಸರಿ ಎಂದು ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ನಟರಿಗೆ ಮಹಾರಾಷ್ಟ್ರ ಎಫ್‌ಡಿಎ ಶಾಕ್ ಕೊಟ್ಟಿದೆ. ನಟ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ನೋಟಿಸ್ ಕೊಟ್ಟಿದ್ದು, ʻವಿಮಲ್ ಏಲಕ್ಕಿʼ ಜಾಹೀರಾತಿನಲ್ಲಿ ನಟರು ನಟಿಸಿದ್ದರು ಕೂಡ ʻವಿಮಲ್ ಪಾನ್ ಮಸಾಲʼ ಉತ್ಪನ್ನ ತೋರಿಸುವ ಪರೋಕ್ಷ ಜಾಹೀರಾತು ಎಂದು ಶಂಕಿಸಿ ಮಹಾರಾಷ್ಟ್ರ ಎಫ್‌ಡಿಎ ನೋಟಿಸ್ ನೀಡಿದೆ.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ನೋಟಿಸ್ ಜಾರಿ ಮಾಡಿದೆ. ಮಹಾರಾಷ್ಟ್ರದಲ್ಲಿ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಪಾನ್ ಮಸಾಲಾ ಮಾರಾಟ ಮತ್ತು ಪ್ರಚಾರವನ್ನು ಈಗಾಗಲೇ ನಿಷೇಧಿಸಲಾಗಿದೆ. ಈ ಜಾಹೀರಾತು ಆ ಬ್ರಾಂಡ್‌ನ ಹೆಸರನ್ನು ಬಳಸಿಕೊಂಡು ಪರೋಕ್ಷವಾಗಿ ನಿಷೇಧಿತ ಉತ್ಪನ್ನವನ್ನು ಪ್ರಚಾರ ಮಾಡುತ್ತಿದೆ ಎಂದು ಎಫ್‌ಡಿಎ ಆರೋಪಿಸಿದೆ.
ಜೊತೆಗೆ ಈ ನಟರು ತಾವು ಜಾಹೀರಾತಿನಲ್ಲಿ ನಟಿಸಿರುವುದಕ್ಕೆ ಸಂಬಂಧಿಸಿದಂತೆ 15 ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿಯನ್ನು ನೀಡುವಂತೆ ಎಫ್‌ಡಿಎ ಕೇಳಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದ್ದು, ತಪ್ಪಿತಸ್ಥರೆಂದು ಸಾಬೀತಾದರೆ ದಂಡದ ಕ್ರಮಗಳನ್ನು ಎದುರಿಸಬೇಕಾಗಬಹುದು. ಈ ಕಾಯ್ದೆಯ ಸೆಕ್ಷನ್ 24ರ ಪ್ರಕಾರ, ದಾರಿ ತಪ್ಪಿಸುವ ಆಹಾರ ಜಾಹೀರಾತು ಮಾಡಿದರೆ 10 ಲಕ್ಷ ರೂವರೆಗೂ ದಂಡ ವಿಧಿಸಲು ಅವಕಾಶ ಇರುತ್ತದೆ.
ವಿಮಲ್ ಇಲಾಯ್ಚಿ ಅಥವಾ ಏಲಕ್ಕಿ ಮೌತ್ ಫ್ರೆಶ್ನರ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ತಂಬಾಕು ಇರುವುದಿಲ್ಲ. ಆದರೆ, ವಿಮಲ್ ಬ್ರ್ಯಾಂಡ್ ಸಂಪೂರ್ಣವಾಗಿ ಪಾನ್ ಮಸಾಲಗೆ ಜೋಡಿತವಾಗಿದೆ. ಹೀಗಾಗಿ, ವಿಮಲ್ ಬ್ರ್ಯಾಂಡ್ನಲ್ಲಿ ಏಲಕ್ಕಿ ಪ್ರಚಾರ ಮಾಡಿದರೂ ಅದು ಪರೋಕ್ಷವಾಗಿ ಪಾನ್ ಮಸಾಲಗೆ ಪ್ರಚಾರ ಮಾಡಿದಂತೆನಿಸುತ್ತದೆ. ಪಾನ್ ಮಸಾಲದಲ್ಲಿ ಹಾನಿಕಾರಕ ತಂಬಾಕು ಇದ್ದು, ಇದು ಬಾಯಿಯಲ್ಲಿ ಕ್ಯಾನ್ಸರ್ ಹುಟ್ಟಲು ಕಾರಣವಾಗುತ್ತದೆ.