Search


ಮಣಿಪುರದಲ್ಲಿ ಹಿಂಸಾಚಾರ ಭುಗಿಲು: 5 ಮಂದಿ ಸಾವು, 10 ಮನೆ ಮತ್ತು 20 ಅಂಗಡಿಗಳಿಗೆ ಬೆಂಕಿ

ಇಂಫಾಲ್: ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದ್ದು, ಶನಿವಾರ ಕಾಮ್‌ಜೋಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆ ಕಾಮ್‌ಜೋಂಗ್ ಜಿಲ್ಲೆಯ ಚಸ್ಸಾದ್ ಪ್ರದೇಶದಲ್ಲಿ 10 ಮನೆಗಳು ಹಾಗೂ 20 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ನಾಗಾ ಮತ್ತು ಕುಕಿ-ಝೋ ಸಮುದಾಯಗಳ ನಡುವಿನ ಸಂಘರ್ಷ ಇತ್ತೀಚಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಕಾಂಗ್‌ಪೋಕ್ಪಿ ಜಿಲ್ಲೆಯಾದ್ಯಂತ ಶನಿವಾರ ಸಂಜೆ 6 ಗಂಟೆಯಿಂದ 24 ಗಂಟೆಗಳ ಸಂಪೂರ್ಣ ಬಂದ್‌ಗೆ ಬುಡಕಟ್ಟು ಏಕತಾ ಸಮಿತಿ (CoTU) ಕರೆ ನೀಡಿದೆ. ಸರಣಿ ಹಿಂಸಾತ್ಮಕ ಘಟನೆಗಳಿಂದಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಕಾಮ್‌ಜೋಂಗ್ ಜಿಲ್ಲೆಯ ಚಸ್ಸಾದ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ 23 ವರ್ಷದ ಮೈಕೆಲ್ ನ್ಗಮಿನ್‌ಲೆನ್ ಹಾಕಿಪ್ ಮೃತಪಟ್ಟಿದ್ದಾರೆ. ಶಂಕಿತ ಸಶಸ್ತ್ರ ಗುಂಪುಗಳು ನಡೆಸಿದ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದೇ ಪ್ರದೇಶದಲ್ಲಿ ನಡೆದ ಬೆಂಕಿ ಹಚ್ಚುವ ಘಟನೆಗಳಲ್ಲಿ ಕನಿಷ್ಠ 10 ಮನೆಗಳು ಮತ್ತು 20 ಅಂಗಡಿಗಳು ಹಾನಿಗೀಡಾಗಿವೆ. ಆದರೆ, ಆಸ್ತಿಪಾಸ್ತಿಗೆ ಉಂಟಾದ ಒಟ್ಟು ನಷ್ಟ ಹಾಗೂ ಎಷ್ಟು ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಪರಿಸ್ಥಿತಿಯನ್ನು ನಿಯಂತ್ರಿಸಲು ಕಾಮ್‌ಜೋಂಗ್ ಜಿಲ್ಲಾಡಳಿತವು ಚಸ್ಸಾದ್ ಪೊಲೀಸ್ ಗೇಟ್ ಜಂಕ್ಷನ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದೆ. ಅಕ್ಟೋಬರ್ 9ರಂದು ಹೊರಡಿಸಲಾದ ಆದೇಶದಂತೆ, ಜಿಲ್ಲಾಧಿಕಾರಿ ಎಲ್.ಎನ್. ಕಾಶುಂಗ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ. ಜಂಕ್ಷನ್‌ನ 400 ಮೀಟರ್ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವುದು ಹಾಗೂ ಮನೆಗಳಿಂದ ಹೊರಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಮುಂದಿನ ಆದೇಶ ಹೊರಬೀಳುವವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ. ಭದ್ರತಾ ಸಿಬ್ಬಂದಿ, ಕರ್ತವ್ಯ ನಿರ್ವಹಿಸುತ್ತಿರುವ ಮ್ಯಾಜಿಸ್ಟ್ರೇಟ್‌ಗಳು, ಅಗತ್ಯ ಸೇವೆಗಳ ಸಿಬ್ಬಂದಿ ಹಾಗೂ ವಿಶೇಷ ಅನುಮತಿ ಪಡೆದವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಹಿಂಸಾಚಾರ ಮತ್ತಷ್ಟು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಮತ್ತು ಭದ್ರತಾ ಪಡೆಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿವೆ.

By Ravikumar - 11-10-2026


Ads in Post