Search


IPLನಲ್ಲಿ ವೈಭವ್ ಸೂರ್ಯವಂಶಿಯಂತ ಬ್ಯಾಟರ್ ಗಳು ಸೃಷ್ಟಿಯಾಗಿದ್ದಾರೆ, ಆದರೆ PSLನಿಂದ ಏನು ಪ್ರಯೋಜನವಿಲ್ಲ ಎಂದ ವಸಿಂ ಅಕ್ರಮ್

ಭಾರತೀಯ ಕ್ರಿಕೆಟ್‌ನ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿಯನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸೀಂ ಅಕ್ರಮ್ ಮುಕ್ತಕಂಠದಿಂದ ಹೊಗಳಿದ್ದಾರೆ. ಇದೇ ವೇಳೆ, ಪಾಕಿಸ್ತಾನ್ ಸೂಪರ್ ಲೀಗ್‌ (PSL) ಬೆಳವಣಿಗೆ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಕಾರ್ಯವೈಖರಿಯನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ. IPL ಮತ್ತು PSL ನಡುವಿನ ಬೆಳವಣಿಗೆಯನ್ನು ಹೋಲಿಕೆ ಮಾಡಿದ ಅಕ್ರಮ್, ಯುವ ಬ್ಯಾಟಿಂಗ್ ಪ್ರತಿಭೆಗಳನ್ನು ಬೆಳೆಸುವಲ್ಲಿ ಪಾಕಿಸ್ತಾನದ ವ್ಯವಸ್ಥೆ ಹಿಂದೆ ಬಿದ್ದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸತತ ಎರಡು IPL ಸೀಸನ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಬಳಿಕ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಆಟಗಾರ ಎಂಬ ದಾಖಲೆಯನ್ನೂ ಅವರು ನಿರ್ಮಿಸಿದ್ದರು. ಯೂಟ್ಯೂಬರ್ ಫುರ್ಖಾನ್ ಭಟ್ಟಿ ಅವರ ಸಂದರ್ಶನದಲ್ಲಿ ಮಾತನಾಡಿದ ಅಕ್ರಮ್, PSL ಆರಂಭವಾಗಿ ಸುಮಾರು ಒಂದು ದಶಕ ಕಳೆದರೂ ಗಮನ ಸೆಳೆಯುವಂತಹ ಬ್ಯಾಟಿಂಗ್ ಪ್ರತಿಭೆಗಳನ್ನು ರೂಪಿಸುವಲ್ಲಿ ಲೀಗ್ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘PSL ಆರಂಭವಾಗಿ ಸುಮಾರು 10 ವರ್ಷಗಳಾಗಿವೆ. ಈ ಅವಧಿಯಲ್ಲಿ PSL ಮೂಲಕ ಹೊರಹೊಮ್ಮಿದ ಒಬ್ಬನೇ ಒಬ್ಬ ಗಮನಾರ್ಹ ಬ್ಯಾಟರ್‌ನನ್ನಾದರೂ ನಾವು ಗುರುತಿಸಿದ್ದೇವೆಯೇ? ಕೆಲವು ಉತ್ತಮ ಬೌಲರ್‌ಗಳು ಸಿಕ್ಕಿದ್ದಾರೆ. ಆದರೆ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರತಿಭೆಯನ್ನು ನಾವು ರೂಪಿಸಿದ್ದೇವೆಯೇ?’ ಎಂದು ಅಕ್ರಮ್ ಪ್ರಶ್ನಿಸಿದರು. ಭಾರತದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಯಂತಹ ಪ್ರತಿಭೆಗಳು ಬೆಳೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಪಾಕಿಸ್ತಾನದ ಕ್ರಿಕೆಟ್ ವ್ಯವಸ್ಥೆಯಲ್ಲೂ ಬದಲಾವಣೆ ಅಗತ್ಯವಿದೆ ಎಂದು ಹೇಳಿದರು.

IPLನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಬೌಲಿಂಗ್ ಕೋಚ್ ಆಗಿಯೂ, PSLನಲ್ಲಿ ಇಸ್ಲಾಮಾಬಾದ್ ಯುನೈಟೆಡ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳ ಮೆಂಟರ್ ಆಗಿಯೂ ಕೆಲಸ ಮಾಡಿರುವ ಅಕ್ರಮ್, ಪಾಕಿಸ್ತಾನದಲ್ಲಿ ತಳಮಟ್ಟದ ಕ್ರಿಕೆಟ್ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕರಾಚಿ ಮತ್ತು ಲಾಹೋರ್‌ನಲ್ಲಿನ ಕ್ಲಬ್ ಕ್ರಿಕೆಟ್ ಅಭಿವೃದ್ಧಿಗೆ PCB ತಲಾ 100 ಮಿಲಿಯನ್ ರೂಪಾಯಿ ಹೂಡಿಕೆ ಮಾಡಬೇಕು. ಇದರಿಂದ ಯುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಸಾಧ್ಯವಾಗಲಿದ್ದು, ಟೆಸ್ಟ್ ಹಾಗೂ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಮತ್ತಷ್ಟು ಪ್ರಗತಿ ಸಾಧಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

By Ravikumar - 12-09-2026


Ads in Post