Search


ಲಂಚವನ್ನ ಸಮನಾಗಿ ಹಂಚಿಕೊಳ್ಳುತ್ತೇವೆ; ಗಂಗಾ ಜಲ ಹಿಡಿದು ಪ್ರಮಾಣ ಮಾಡಿದ ನಗರಸಭೆ ಸದಸ್ಯರು

ಉತ್ತರ ಪ್ರದೇಶದ ಶಹಜಹಾನ್‌ಪುರ ಮಹಾನಗರ ಪಾಲಿಕೆಯ ಕೆಲ ಸದಸ್ಯರು ಗಂಗಾಜಲ ಹಿಡಿದು ಪಾಲಿಕೆಯಿಂದ ಬರುವ ಲಂಚ/ಕಮಿಷನ್‌ ಹಣವನ್ನು ಸಮನಾಗಿ ಹಂಚಿಕೊಳ್ಳುವುದಾಗಿ ಪ್ರಮಾಣ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಕೆಲವರು ಕೈಯಲ್ಲಿ ಗಂಗಾಜಲ ಹಿಡಿದು ಪ್ರಮಾಣ ಮಾಡುತ್ತಿರುವುದು ಕಂಡುಬರುತ್ತದೆ. ಪಾಲಿಕೆಗೆ ಬರುವ ಹಣವನ್ನು 60 ಮಂದಿ ಸದಸ್ಯರ ನಡುವೆ ಸಮನಾಗಿ ಹಂಚಿಕೊಳ್ಳಬೇಕು ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಬರುತ್ತದೆ. ಅಲ್ಲದೆ, ಗುಂಪಿನ ಯಾವುದೇ ಸದಸ್ಯರಿಗೆ ಸಮಸ್ಯೆ ಎದುರಾದರೆ ಎಲ್ಲರೂ ಒಟ್ಟಾಗಿ ನಿಲ್ಲಬೇಕು ಎಂಬ ರೀತಿಯ ಪ್ರಮಾಣವನ್ನೂ ಮಾಡಲಾಗಿದೆ ಎಂದು ವರದಿಯಾಗಿದೆ. 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.  ಈ ನಡುವೆ ಶಹಜಹಾನ್‌ಪುರ ಮಹಾನಗರ ಪಾಲಿಕೆ ಆಯುಕ್ತೆ ಸೌಮ್ಯಾ ಗುರಾನಿ ಅವರು ವಿಡಿಯೋ ಕುರಿತು ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋ 2025ರ ನವೆಂಬರ್‌ನಲ್ಲಿ ಚಿತ್ರೀಕರಿಸಲ್ಪಟ್ಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋದಲ್ಲಿರುವವರ ಗುರುತು ಮತ್ತು ಅದರಲ್ಲಿನ ಆರೋಪಗಳ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

By Ravikumar - 27-08-2026


Ads in Post