ಶೈವರು ಮೂಲತಃ ಶಿವನ ಆರಾಧಕರು. ಇವರು ಬಸವಣ್ಣನವರ ಕಾಲಘಟ್ಟಕ್ಕಿಂತಲೂ ಬಹು ಹಿಂದಿನಿಂದ ಇದ್ದವರು, ಈಗಲೂ ಇರುವವರು. ಇವರು ಶಿವನನ್ನು ಬಿಟ್ಟು ಬೇರೆ ಯಾರನ್ನೂ ಪೂಜಿಸುವುದಿಲ್ಲ. ಭಾರತದ ನಾನಾ ಭಾಗಗಳಲ್ಲಿ ಇವರು ಹರಡಿಕೊಂಡಿದ್ದಾರೆ. ಇವರಲ್ಲಿ, ಪಾಶುಪತ ಶೈವ, ಸೋಮ ಶೈವ, ದಕ್ಷಿಣ ಶೈವ, ಕಾಳಮುಖ ಶೈವ, ಲಾಕುಳ ಶೈವ, ಯಾವಳ ಶೈವ, ಸಾಮಾನ್ಯ ಶೈವ, ಮಿಶ್ರ ಶೈವ, ಶುದ್ಧ ಶೈವ, ಆದಿ ಶೈವ, ಅನು ಶೈವ, ಅವಾಂತರ ಶೈವ ಎಂಬಿತ್ಯಾದಿ ಪಂಗಡಗಳಿವೆ.
ಇದೇ ಶೈವ ಪರಂಪರೆಯಲ್ಲಿ ಬರುವ ಮತ್ತೊಂದು ಪಂಗಡವೇ ವೀರಶೈವ. ಈ ಪಂಗಡವರು ಕರ್ನಾಟಕ ಬಿಟ್ಟರೆ ಬೇರೆಡೆ ಕಾಣಸಿಗುವುದು ಆಂಧ್ರಪ್ರದೇಶ, ಕೇರಳದಲ್ಲಿ. ಇವರಲ್ಲಿ ಮಾಂಸಾಹಾರಿಗಳು, ಸಸ್ಯಾಹಾರಿಗಳೂ ಇದ್ದಾರೆ. ಹಾಗಾಗಿ, ಈ ವೀರಶೈವರನ್ನು ಬ್ರಾಹ್ಮಣ ಶೈವ, ಕ್ಷತ್ರಿಯ ಶೈವ ಎಂದೂ ವಿಂಗಡಿಸುತ್ತಾರೆ.
ಈ ಎಲ್ಲಾ ಬಗೆಯ ಶೈವರಿಗೆ ಪಂಚ ಪೀಠಗಳೇ ಮೂಲ. ಆ ಪಂಚಪೀಠಗಳೆಂದರೆ, ಕಾಶಿ ಮಠ, ರಾಮೇಶ್ವರ ಮಠ, ಉಜ್ಜಯಿನಿ ಮಠ, ರಂಭಾಪುರಿ ಮಠ ಹಾಗೂ ಶ್ರೀಶೈಲ ಮಠ. ಈ ಐದು ಮಠಗಳಿಗೆ (ಪಂಚ ಪೀಠ) ಶೈವರು ನಡೆದುಕೊಳ್ಳುತ್ತಾರೆ.
ಬಸವಣ್ಣನವರ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಇದ್ದ ವೀರಶೈವರು ಬಸವಣ್ಣನವರ ಪ್ರಭಾವಕ್ಕೊಳಗಾಗಿ ಬಸವ ತತ್ವಗಳನ್ನು ಅಳವಡಿಸಿಕೊಂಡರು. ಹಾಗೆ, ಬಸವ ತತ್ವ ಅಳವಡಿಸಿಕೊಂಡವರನ್ನು ಅವರ ಮೂಲ ಜಾತಿಗೆ ತಕ್ಕಂತೆ, ಬಣಜಿಗ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು, ಗಾಣಿಗ ಲಿಂಗಾಯತರು, ಗೌಡ ಲಿಂಗಾಯತರು ಎಂದು ಕರೆಯುವುದು ರೂಢಿಗೆ ಬಂದಿದ್ದರಿಂದ, ಲಿಂಗಾಯತ ಧರ್ಮವನ್ನು ಅಳವಡಿಸಿಕೊಂಡ ವೀರಶೈವರನ್ನು 'ವೀರಶೈವ ಲಿಂಗಾಯತರು' ಎಂದು ಕರೆಯಲಾಯಿತು.