Search


ಮೊಮ್ಮಗಳು ಹುಟ್ಟಿದಾಗ, ಗಂಡು ಮಗುವಾಗಲಿಲ್ಲವೆಂಬ ಬೇಸರ ಪತ್ನಿಗೆ ಇತ್ತು; ಮಹಿಳಾ ಸ್ವಾವಲಂಬನೆ ಬಗ್ಗೆ ಸಿಎಂ ಮಾತು

ಗಂಡು ಸಂತಾನದ ಬಗ್ಗೆ ಸಮಾಜಕ್ಕಿರುವ ಮೋಹವನ್ನ ಸಿಎಂ ಡಿಕೆ ಶಿವಕುಮಾರ್‌ ಕಾರ್ಯಕ್ರಮವೊಂದರಲ್ಲಿ ಪ್ರಶ್ನಿಸಿದ್ದಾರೆ, ʻಮಹಿಳೆಯರು ಸಮಾನತೆ, ಸ್ವಾವಲಂಬನೆ ಅಂತೆಲ್ಲ ಮಾತಾಡ್ತೀರಿ. ಆದರೆ ಮಗು ಹುಟ್ಟುವಾಗ ಮೊದಲು ಗಂಡು ಮಗು ಆಗಬೇಕೆಂದು ಬಯಸುತ್ತೀರಿ, ಏಕೆ ಹೀಗೆ ಈ ಮನೋಧರ್ಮ ಏಕೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ʻಒಟ್ಟಿಗೆ ಬೆಳೆಯೋಣ' ಎಂಬ ಮಹಿಳಾ ಉದ್ಯಮಿಗಳ ಸಮ್ಮೇಳನದಲ್ಲಿ ಮಹಿಳೆಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಎಂ ಡಿ ಕೆ ಶಿವಕುಮಾರ್ ʻನನಗೂ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ, ಆದರೆ ನಾನೊಂದು ಪ್ರಶ್ನೆ ನಿಮ್ಮಲ್ಲಿ ಕೇಳಲು ಬಯಸುತ್ತೇನೆ. ಭಾರತದ ಪ್ರತಿ ಮೂಲೆಯಲ್ಲಿರುವ ಮಹಿಳೆಯರು ಮೊದಲು ಹುಟ್ಟುವ ಮಗು ಗಂಡು ಆಗಬೇಕು ಎಂದು ಏಕೆ ಬಯಸುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ, ನೀವು ನನಗೆ ಉತ್ತರ ಕೊಡಬೇಕು ಎಂದರು.

ಜೊತೆಗೆ ಕಳೆದ ಮೇ 1ರಂದು ಜನಿಸಿದ ಮೊಮ್ಮಗಳ ವಿಷಯವನ್ನು ಉದಾಹರಣೆಯಾಗಿ ತೆಗೆದುಕೊಂಡ ಸಿಎಂ ʻಮೊಮ್ಮಗಳು ಹುಟ್ಟಿದಾಗ ನನಗೆ ಬಹಳ ಖುಷಿಯಾಯ್ತು, ಆದರೆ ನನ್ನ ಪತ್ನಿ ಮೊದಲ ಮಗು ಗಂಡು ಮಗುವಾಗಬೇಕಿತ್ತು ಎಂದು ಹೇಳಿದರು, ಈ ಮಾತು ಕೇಳಿದಾಗ ನನಗೆ ಬಹಳ ಬೇಸರವಾಯ್ತು, ಆಗ ನಾನೆಂದೆ, ಏಕೆ ಆ ರೀತಿ ಯೋಚನೆ ಮಾಡುವುದು? ನನ್ನ ಮಗಳು ಐಶ್ವರ್ಯ ಬೆಳೆದಿರುವ ರೀತಿ ಇಂದು ಆಕೆ ಮಾಡುತ್ತಿರುವ ಕೆಲಸ ನೋಡಿ ನನಗೆ ಬಹಳ ಹೆಮ್ಮೆಯಾಗುತ್ತಿದೆ, ಅವಳು ಜೀವನವನ್ನು ನಿಭಾಯಿಸುತ್ತಿರುವ ರೀತಿ, ಮಾಡುತ್ತಿರುವ ಕೆಲಸ- ಸಾಧನೆ ನೋಡಿ ನನಗೆ ನಿಜಕ್ಕೂ ಖುಷಿಯಾಗುತ್ತಿದೆ. ಹೆಣ್ಣು ಮಕ್ಕಳ ಬಗೆಗಿನ ನನ್ನ ಪ್ರೀತಿಯನ್ನು ನೂರ್ಮಡಿ ಮಾಡಿದೆ, ನಾನು ನಿಮ್ಮನ್ನು ನಿರುತ್ಸಾಹಗೊಳಿಸುತ್ತಿಲ್ಲ, ಆದರೆ ಕುತೂಹಲದಿಂದ ಕೇಳುತ್ತಿದ್ದೇನೆ ಎಂದು ನಗುತ್ತಾ ಮುಖ್ಯಮಂತ್ರಿಗಳು ನೆರೆದಿದ್ದ ಮಹಿಳಾ ವೃಂದವನ್ನು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಸಿಎಂ ʻಭಾರತೀಯರಲ್ಲಿ ಈ ಮನೋಧರ್ಮ ಏಕಿದೆ ಎಂಬುದು ನನಗೆ ಅರ್ಥವಾಗಿಲ್ಲ, ಇಡೀ ವಿಶ್ವದಲ್ಲಿ ಅನೇಕ ಮಹಿಳಾ ನಾಯಕರು ಇದ್ದಾರೆ, ರಾಮಾಯಣದಲ್ಲಿ ರಾಮನಿಗಿಂತಲೂ ಸೀತೆ ತ್ಯಾಗ ಮಿಗಿಲು. ಮಹಾಭಾರತದಲ್ಲಿ ಕುಂತಿ ಪಾತ್ರ ದೊಡ್ಡದು. ಹೀಗಾಗಿ ನಿಮ್ಮ ನುಡಿ ನಡೆಯಲ್ಲೂ ಇರಲಿ, ಪೋಷಕರು ಹೆಣ್ಣುಮಕ್ಕಳಿಗೆ ಇನ್ನಷ್ಟು ಧೈರ್ಯ, ಮಾನಸಿಕ ಸ್ಥೈರ್ಯ, ಶಿಸ್ತು ಕಲಿಸಬೇಕು, ಮಹಿಳೆಯರು ಕುಟುಂಬ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವುದರಿಂದ ಹಿಡಿದು ಉದ್ಯಮಗಳನ್ನು ಕಟ್ಟುವವರೆಗೆ, ಇತರರಿಗೆ ಅವಕಾಶಗಳನ್ನು ಸೃಷ್ಟಿಸುವವರೆಗೆ, ಸವಾಲುಗಳನ್ನು ಸಾಧ್ಯತೆಗಳಾಗಿ ಪರಿವರ್ತಿಸುವ ಸಾಮರ್ಥ್ಯ ಮಹಿಳೆಯರಲ್ಲಿದೆ. ಎಲ್ಲ ಮಹಿಳಾ ಉದ್ಯಮಿಗಳಿಗೂ ತಮ್ಮ ಉದ್ಯಮಶೀಲತಾ ಪಯಣದಲ್ಲಿ ನಿರಂತರ ಯಶಸ್ಸು ಮತ್ತು ಬೆಳವಣಿಗೆ ದೊರೆಯಲಿ ಎಂದು ಹಾರೈಸುತ್ತೇನೆ ಎಂದರು.

By Ravikumar - 02-09-2026


Ads in Post