Search


ಸಾಹಸಸಿಂಹ ವಿಷ್ಣುವರ್ಧನ್ ಅವರು ಆಗಿನ ಕಾಲದ ಜನಪ್ರಿಯ ನಟಿ ಮಾಲಾಶ್ರೀ ಅವರ ಜೊತೆ ಒಂದು ಚಿತ್ರದಲ್ಲೂ ನಟಿಸಲಿಲ್ಲ ಏಕೆ?

ತಾರೆ ಮಾಲಾಶ್ರೀ 1989ರಲ್ಲಿ ನಂಜುಂಡಿ ಕಲ್ಯಾಣ ಚಿತ್ರದಿಂದ ಕನ್ನಡ ಚಿತ್ರ ರಂಗಕ್ಕೆ ಬಂದವರು. ರಾಘವೇಂದ್ರ ರಾಜ್ ಕುಮಾರ್, ಶಶಿ ಕುಮಾರ್, ಜಗ್ಗೇಶ್, ಸುನಿಲ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್ ಮೊದಲಾದ ತಾರೆಯರ ಜೊತೆ ನಟಿಸಿದ್ದಾರೆ. ನನಗೆ ವಿಷ್ಣುವರ್ಧನ್ ಅವರ ಜೊತೆ ನಟಿಸುವ ಅವಕಾಶ ಸಿಗಲಿಲ್ಲ ಎಂದು ಸಂದರ್ಶನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ ಕೂಡಾ. ಆರಂಭದ ದಿನಗಳಲ್ಲಿ ಅವರು ಯಾವ ಚಿತ್ರದಲ್ಲಿ ನಟಿಸಿದರು ಯಶಸ್ಸು ದಕ್ಕಿತು. ಯಾರೇ ಹೀರೋ ಇದ್ದಾಗಲೂ.ಇದು ಅವರ ವೃತ್ತಿ ಬದುಕಿನ ವಿಶೇಷ.70+ಚಿತ್ರಗಳಲ್ಲಿ ನಟಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅವರೇ ನಾಯಕಿ ಪ್ರಧಾನ ಚಿತ್ರಗಳ ಮೂಲಕ ಆಕ್ಷನ್ ಚಿತ್ರಗಳ ತಾರೆಯಾಗಿ ಬ್ರಾಂಡ್ ಆ ದರು. ತೆಲುಗು ಚಿತ್ರರಂಗದ ನಂಟು ಅವರಿಗಿತ್ತು.ಅವರ ಕೆಲ ಸಿನಿಮಾಗಳನ್ನೇ ಗಮನಿಸಿ. ಎಸ್. ಪಿ. ಭಾರ್ಗವಿ, ರೌಡಿ ಎಂ ಎಲ್ ಎ, ಲೇಡಿ ಪೊಲೀಸ್, ಸರ್ಕಲ್ ಇನ್ಸ್ಪೆಕ್ಟರ್, ಸಿ ಬಿ ಐ ದುರ್ಗಾ, ಟೈಗರ್ ಪದ್ಮಿನಿ, ಲೇಡಿ ಕಮಿಷನರ್, ಲೇಡಿ ಟೈಗರ್, ಜಿಂದಾ ಬಾದ್, ಚಾಮುಂಡಿ, ದುರ್ಗಿ, ಕಿರಣ್ ಬೇಡಿ, ಭವಾನಿ ಐ ಪಿ ಎಸ್, ಪ್ರತಾಪ್…. ಇತ್ಯಾದಿ ಇತ್ಯಾದಿ.ಇಲ್ಲಿ ಅವರ ಇಮೇಜಿನ ರೂಪಾoತರ ಗಮನಿಸಬಹುದು

ಎಪ್ಪತ್ತರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿ, 220 ಚಿತ್ರಗಳಲ್ಲಿ ಅಭಿನಯಿಸಿದ ವಿಷ್ಣುವರ್ಧನ್ ಬಿ ವಿ. ಕಾರಂತ್, ಗಿರೀಶ್ ಕಾರ್ನಾಡ್, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ಸೇರಿದಂತೆ ಪ್ರಸಿದ್ಧ ನಿರ್ದೇಶಕರ ಗರಡಿಯಲ್ಲಿ ಪ ಳಗಿದವರು. ಕಲಾತ್ಮಕ ಚಿತ್ರಗಳಿಗೂ ಸೈ ಎಂದ ವಿಷ್ಣುವರ್ಧನ್ ಸುಪ್ರಭಾತ ದಂತಹ ಚಿತ್ರಗಳನ್ನು ಕೊಟ್ಟವರು. ಇಂತಿಪ್ಪ ಕಲಾವಿದ ಆ ದಶಕಗಳಲ್ಲಿ ಕಾಣಿಸಿಕೊಂಡ ದ್ದು ಮುತ್ತಿನ ಹಾರ, ಮತ್ತೆ ಹಾಡಿತು ಕೋಗಿಲೆ, ಹಾಲುಂಡ ತವರು, ಲಾಲಿ, ಪರ್ವ, ಹಬ್ಬ, ದೀಪಾವಳಿ,ಸಿಂಹಾದ್ರಿಯ ಸಿಂಹ, ನೀನು ನಕ್ಕರೆ ಹಾಲು ಸಕ್ಕರೆ, ಹೃದಯ ಗೀತೆ,ಜೀವನದಿ, ನಿಷ್ಕರ್ಷ, ಹೃದಯವಂತ, ದಿಗ್ಗಜರು, ಸೂರ್ಯ ವಂಶ, ಈ ಬಂಧನ, ಯಜಮಾನ, ಸೂರಪ್ಪ, ಕೋಟಿಗೊಬ್ಬ, ಆಪ್ತ ಮಿತ್ರ, ಆಪ್ತ ರಕ್ಷಕ ಸೇರಿದಂತೆ ಯಶಸ್ವಿ ಉತ್ತಮ ಮತ್ತು ಸದಭಿರುಚಿಯ ಕೌಟುಂಬಿಕ ಚಿತ್ರಗಳಲ್ಲಿ.

ಈ ರೀತಿಯ ಕೌಟುಂಬಿಕ ಚಿತ್ರಗಳಲ್ಲಿ ಆಕ್ಷನ್ ಪಾತ್ರಗಳ ಇಮೇಜ್ ಇರುವ ಕಲಾವಿದೆ ಹೇಗೆ ಸೂಕ್ತ ಎಂಬ ಪ್ರಶ್ನೆ ಸಹಜವೇ.

ಇದರ ಹೊರತಾಗಿ ತೆರೆ ಮರೆಯ ಒಂದೆರಡು ಘಟನೆಗಳು. ಮಾಲಾಶ್ರೀ ನಟಿಸಿದ ಚಿತ್ರಗಳು ಒಂದರ ಹಿಂದೊಂದು ಯಶಸ್ಸು ಕಂಡ ನಂತರ ಮಾಲಾಶ್ರೀ ಸಂದರ್ಶನ ಒಂದರಲ್ಲಿ ಆಡಿದ್ದ ಮಾತುಗಳು. ಇದೂ ಅಂದು ದೊಡ್ಡ ರಾದ್ಧಾಂತ ಎಬ್ಬಿಸಿತ್ತು. ಈ ಸಂಬಂಧ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅಂದು ನನ್ನ ಹಾಜರಿಯೂ ಇತ್ತು. ನನ್ನೆದುರು….. ನಟಿಸಿದರೂ ಗೆಲುವು ಗ್ಯಾರಂಟಿ ಎಂಬರ್ಥದ ಮಾತುಗಳವು. ಅಂದು ಮಾಲಾಶ್ರೀ ಪರವಾಗಿ ವಾಣಿಜ್ಯ ಮಂಡಳಿಯ ಕೆಲ ಮಂದಿಯೂ ವಕಾಲತ್ತು ವಹಿಸಲು ನಿಂತಿದ್ದರು.ಇದೂ ಒಂದು ಕಾರಣ ಅಂಬೋದು ಒಂದು ವಾದ.

ಮತ್ತೊಂದು ವಿಷ್ಣುವರ್ಧನ್ ಅಭಿನಯಿಸಿದ ಲಯನ್ ಜಗಪತಿ ರಾವ್ ಚಿತ್ರ ಬಿಡುಗಡೆ ಹೊತ್ತಿನಲ್ಲಿ ಮಾಲಾಶ್ರೀ ಅಭಿನಯಿಸಿದ ಹೃದಯ ಹಾಡಿತು ತೆರೆಗೆ ಬಂತು. ಇಲ್ಲಿ ಹೃದಯ ಹಾಡಿತು ಗೆಲುವು ಕಂಡದ್ದು ಅವರಿಗೆ ಬೇಸರ ತಂದಿತ್ತು ಎಂಬ ಸುದ್ದಿ ಇತ್ತು. ಆದರೆ ಈ ಬಗ್ಗೆ ಚರ್ಚೆ ಮಾತ್ರಎಲ್ಲಿಯೂ ನಡೆಯಲಿಲ್ಲ ಎನ್ನಬಹುದು.

By S M Swathi - 23-06-2026


Ads in Post