ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆಯ ಪಟ್ಟಿ ಸಿದ್ದವಾಗಿದೆ. ಅರಣ್ಯ ಸಚಿವ ರಾಮಲಿಂಗರೆಡ್ಡಿಯವರು ಈ ಪಟ್ಟಿಯನ್ನ ಪ್ರಕಟಿಸಿದ್ದು, ಇನ್ಮುಂದೆ ಅಂಬಾರಿ ಹೊರುವ ಹುದ್ದೆಯಿಂದ ಅಭಿಮನ್ಯು ನಿವೃತ್ತಿ ಪಡೆದಿದ್ದಾನೆ ಎಂಬ ಅಂಶವು ಬಯಲಾಗಿದೆ. ಇದೇ ಆಗಸ್ಟ್ 26ರಂದು ಗಜಪಡೆ ಸಾಂಸ್ಕೃತಿಕ ನಗರಿಗೆ ಪಯಣ ಬೆಳೆಸಲಿದ್ದು, ಈ ಬಾರಿ ತಾಯಿ ಚಾಮುಂಡೇಶ್ವರಿಯನ್ನ ಹೊತ್ತು ಮೆರವಣಿಗೆಯಲ್ಲಿ ಸಾಗುವ ಆನೆ ಯಾರು ಎಂಬುದು ಇನ್ನು ನಿಗೂಢವಾಗಿಯೆ ಉಳಿದಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈಗಾಗಲೇ ಮುಹೂರ್ತ ನಿಗದಿ ಆಗಿದ್ದು, ದಿನಗಣನೆ ಶುರುವಾಗಿದೆ. ಮೈಸೂರು ದಸರಾ ಅಕ್ಟೋಬರ್ 11ಕ್ಕೆ ಉದ್ಘಾಟನೆಗೊಳ್ಳಲಿದ್ದು, 21ರಂದು ಜಂಬೂಸವಾರಿ ನಡೆಯಲಿದೆ. ಆದರೆ ಈ ಬಾರಿ ಅಂಬಾರಿ ಹೊತ್ತು ಸಾಗುತ್ತ ಆನೆ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗಿದೆ. 60 ವರ್ಷ ಆದ ಹಿನ್ನಲೆ ಈ ಬಾರಿ ಅಭಿಮನ್ಯು ದಸರಾದಿಂದ ಹೊರಗುಳಿಯಲಿದ್ದಾನೆ. ಸತತ ಆರು ವರ್ಷಗಳಿಂದ ವಿಜಯದಶಮಿಯ ಜಂಬೂಸವಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ 750 ಕೆಜಿ ಚಿನ್ನದ ಅಂಬಾರಿಯನ್ನು ಗಾಂಭೀರ್ಯದಿಂದ ಹೊತ್ತು ಮುನ್ನಡೆಸಿದ್ದ ಗಜಪಡೆಯ ಕ್ಯಾಪ್ಟನ್ ‘ಅಭಿಮನ್ಯು’ ಈ ಬಾರಿ ವಿಶ್ರಾಂತಿ ಪಡೆಯಲಿದ್ದಾನೆ.
ಇನ್ನು ಗಜಪಡೆಯ ಅಂತಿಮ ಪಟ್ಟಿಯನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ದಸರಾದಲ್ಲಿ ಒಟ್ಟು 12 ಆನೆಗಳು ಪಾಲ್ಗೊಳ್ಳುತ್ತಿದ್ದು, 2 ಆನೆಗಳನ್ನು ಕಾಯ್ದಿರಿಸಲಾಗಿದೆ. ದುಬಾರೆ ಆನೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಸೇರಿದಂತೆ, ಕಾವೇರಿ, ಮಹೇಂದ್ರ, ಲಕ್ಷ್ಮೀ, ರೂಪ, ಚೈತ್ರ, ಶ್ರೀಕಂಠ ಆನೆಗಳನ್ನ ಅರಣ್ಯ ಇಲಾಖೆ ಫೈನಲ್ ಮಾಡಿದೆ, ಕಳೆದ ವರ್ಷ ತನ್ನ ತುಂಟಾಟದಿಂದ ಪ್ರವಾಸಿಗರ ಗಮನ ಸೆಳೆದಿದ್ದ ಭೀಮನನ್ನ ಕಾಯ್ದಿರಿಸಲಾಗಿದೆ.